

ಶಿವಮೊಗ್ಗ: ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯಿಂದ ಶಿವಮೊಗ್ಗ ತಾಲೂಕು ಸರ್ಕಾರಿ ನೌಕರರ ಸಮೇಳನ, ಪ್ರಜಾಸ್ನೇಹಿ ಆಡಳಿತ ಕಾರ್ಯಾಗಾರ ಮತ್ತು ನೌಕರರ ಫ್ಯಾಮಿಲಿ ಮಾರ್ಟ್ ಉದ್ಘಾಟನಾ ಸಮಾರಂಭ ಫೆಬ್ರವರಿ 4ರಂದು ಬೆಳಗ್ಗೆ 10.30ಕ್ಕೆ ನಗರದ ಎನ್‌ಇಎಸ್ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ತಿಳಿಸಿದರು.
ಶಿವಮೊಗ್ಗ ತಾಲೂಕಿನ 8 ಸಾವಿರ ನೌಕರರು ಸಮ್ಮೇಳನದಲ್ಲಿ ಪಾಲ್ಗೊಳ್ಳುವರು. ಕೆಲಸದ ಒತ್ತಡ ಮರೆತು ಇಡೀ ದಿನ ಸಮ್ಮೇಳನದಲ್ಲಿ ನೌಕರರು ಪಾಲ್ಗೊಳ್ಳುವರು. ನೌಕರರಿಗಾಗಿ ವಾಗ್ಮಿ ಡಾ. ಗುರುರಾಜ ಕರ್ಜಗಿ ಅವರು ಪ್ರಜಾಸ್ನೇಹಿ ಆಡಳಿತದ ಬಗ್ಗೆ ವಿಶೇಷ ಉಪನ್ಯಾಸ ನೀಡುವರು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಅವರ ನಗೆಹಬ್ಬವಿದ್ದು ಸಮ್ಮೇಳನದಲ್ಲಿ ಹಾಜರಾಗುವ ನೌಕರರಿಗೆ ಒಒಡಿ(ಅನ್ಯ ಕಾರ್ಯ ನಿಮಿತ್ತ ಸಾಂದರ್ಭಿಕ ರಜೆ) ಸೌಲಭ್ಯ ಕಲ್ಪಿಸಲಾಗುತ್ತಿದೆ. ಪ್ರತಿ ನೌಕರರಿಗೆ ಬ್ಯಾಗ್ ವಿತರಣೆ ಮಾಡಲಾಗುತ್ತಿದೆ. ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಸರ್ಕಾರಿ ನೌಕರರ ಭವನದ ಹಿಂಭಾಗ ಫ್ಯಾಮಿಟಿ ಮಾರ್ಟ್‌ನ್ನು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹಾಗೂ ಎನ್‌ಇಎಸ್ ಮೈದಾನದಲ್ಲಿ ಶಾಸಕ ಕೆ.ಎಸ್.ಈಶ್ವರಪ್ಪ ಅವರು ಸಮ್ಮೇಳನ ಉದ್ಘಾಟಿಸುವರು. ಎಂಎಲ್‌ಸಿಗಳಾದ ಆಯನೂರು ಮಂಜುನಾಥ, ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ಎಸ್.ಎಲ್.ಭೋಜೆಗೌಡ, ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್, ಪದವೀಧರ ಸಹಕಾರ ಸಂಘದ ಅಧ್ಯಕ್ಷ ಎಸ್.ಪಿ.ದಿನೇಶ್ ಮುಖ್ಯ ಅತಿಥಿಯಾಗಿರುವರು. ಡಿಸಿ ಡಾ. ಆರ್.ಸೆಲ್ವಮಣಿ, ಜಿಪಂ ಸಿಇಒ ಎನ್.ಡಿ.ಪ್ರಕಾಶ್, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಸೇರಿದಂತೆ ಅಧಿಕಾರಿಗಳು, ಸಂಘದ ಪದಾಧಿಕಾರಿಗಳು, ವಿವಿಧ ಜಿಲ್ಲೆಗಳ ಅಧ್ಯಕ್ಷರು ಪಾಲ್ಗೊಳ್ಳುವರು ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ಆರ್.ಮೋಹನ್‌ಕುಮಾರ್, ಜಿಲ್ಲಾ ಕಾರ್ಯದರ್ಶಿ ಡಿ.ಟಿ.ಕೃಷ್ಣಮೂರ್ತಿ, ಗೌರವಾಧ್ಯಕ್ಷ ಆರ್.ಪಾಪಣ್ಣ, ಹಿರಿಯ ಉಪಾಧ್ಯಕ್ಷರಾದ ಕೆ.ಅರುಣ್‌ಕುಮಾರ್, ಕೆ.ಪ್ರಸನ್ನ, ಆರ್.ಮಾರುತಿ ಸುದ್ದಿಗೋಷ್ಠಿಯಲ್ಲಿದ್ದರು.