ಸತೀಶ್ ಜಾರಕಿಹೊಳಿ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

9 smg 6
Published on

ಶಿವಮೊಗ್ಗ: ಹಿಂದು ಪದ ಅಶ್ಲೀಲತೆಯಿಂದ ಕೂಡಿದೆ ಎಂಬ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಮತ್ತು ಹಿಂದುಪರ ಸಂಘಟನೆಗಳ ಮುಖಂಡರು ಬುಧವಾರ ನಗರದ ಗೋಪಿ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು.

ಸತೀಶ್ ಜಾರಕಿಹೊಳಿ ಅವರು ಹಿಂದು ಪದದ ಬಗ್ಗೆ ಕೆಟ್ಟದಾಗಿ ನಾಲಿಗೆ ಹರಿಬಿಟ್ಟಿದ್ದಾರೆ. ತಕ್ಷಣವೇ ಅವರು ಹಿಂದುಗಳ ಕ್ಷಮೆಯಾಚಿಸಬೇಕು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತಕ್ಷಣವೇ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ಒತ್ತಾಯಿಸಿದರು.

ಹಿಂದು ಧರ್ಮದ ಉಳಿವಿಗಾಗಿ ನಾವೆಲ್ಲರೂ ಬೀದಿಗಿಳಿದು ಹೋರಾಟ ಮಾಡುವ ಸ್ಥಿತಿ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಸತೀಶ್ ಜಾರಕಿಹೊಳಿ ಬಾಯಿಗೆ ಬಂದಂತೆ ಮಾತನಾಡಿದ್ದು ಅವರ ಮೇಲೆ ಧರ್ಮ ನಿಂದನೆ ಕೇಸ್ ದಾಖಲಿಸಬೇಕು. ಪ್ರತಿ ತಾಲೂಕಿನಲ್ಲೂ ಕೇಸ್ ದಾಖಲಿಸುವ ಮೂಲಕ ಅವರಿಗೆ ಬಿಸಿ ಮುಟ್ಟಿಸಬೇಕು. ಹಿಂದುಗಳನ್ನು ಕಾಂಗ್ರೆಸ್ ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಕಿಡಿಕಾರಿದರು.

ಹಿಂದು ಸಂಘಟನೆ ಮುಖಂಡ ದೀನದಯಾಳು, ಮಾಜಿ ಉಪ ಮೇಯರ್ ಸುರೇಖಾ ಮುರುಳೀಧರ್, ಬಿಜೆಪಿ ನಗರ ಅಧ್ಯಕ್ಷ ಎನ್.ಕೆ.ಜಗದೀಶ್ ಮಾತನಾಡಿದರು. ಮೇಯರ್ ಶಿವಕುಮಾರ್, ಉಪ ಮೇಯರ್ ಲಕ್ಷ್ಮೀ ಶಂಕರನಾಯ್ಕ, ಸೂಡಾ ಅಧ್ಯಕ್ಷ ಎನ್.ಜೆ.ನಾಗರಾಜ್, ಪಾಲಿಕೆ ಸದಸ್ಯರಾದ ಎಸ್.ಜ್ಞಾನೇಶ್ವರ್, ಲತಾ ಗಣೇಶ್, ಸುನೀತಾ ಅಣ್ಣಪ್ಪ, ಸುವರ್ಣಾ ಶಂಕರ್, ಶಂಕರ್ ಗನ್ನಿ, ಕಲ್ಪನಾ ರಮೇಶ್, ಮುಖಂಡರಾದ ಸಂತೋಷ್ ಬಳ್ಳೆಕೆರೆ, ಮೋಹನ್ ರೆಡ್ಡಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net