ಅರಣ್ಯ ಹಕ್ಕು ಕಾಯ್ದೆ ಪುಸ್ತಕ ಹರಿದು ರೈತರ ಆಕ್ರೋಶ

12a
Published on

ಶಿವಮೊಗ್ಗ: ಅರಣ್ಯ ಹಕ್ಕು ಕಾಯ್ದೆ ವಿರುದ್ಧ ರೈತರ ಮೇಲೆ ಕೇಸ್ ದಾಖಲಿಸಿರುವ ಎಸಿಎಫ್ ಪ್ರವೀಣ್‌ಕುಮಾರ್ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಲೆನಾಡು ರೈತರ ಹೋರಾಟ ಸಮಿತಿ ಸೊರಬ ತಾಲೂಕು ಘಟಕದ ರೈತರು ಶುಕ್ರವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಾಗರ, ಸೊರಬ, ಶಿಕಾರಿಪುರ ಭಾಗದಲ್ಲಿ ರೈತರಿಗೆ ಅರಣ್ಯ ಅಧಿಕಾರಿಗಳು ನೋಟಿಸ್ ನೀಡಿದ್ದು, ಭೂ ಒತ್ತುವರಿ ಹೆಸರಿನಲ್ಲಿ ಅರಣ್ಯ ಇಲಾಖೆ ರೈತರಿಗೆ ಕಿರುಕುಳ ನೀಡುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅವರ ಎದುರೇ ಅರಣ್ಯ ಹಕ್ಕು ಕಾಯ್ದೆ ಪುಸ್ತಕ ಹರಿದು ಆಕ್ರೋಶ ವ್ಯಕ್ತಪಡಿಸಿದರು.

ಸೊರಬ ತಾಲೂಕಿನ ಗೆಂಡ್ಲ ಗ್ರಾಪಂ ವ್ಯಾಪ್ತಿಯ ಸಿಡ್ಡಿಹಳ್ಳಿ ಗ್ರಾಮದ ಸರ್ವೆ ನಂಬರ್ 11ರಲ್ಲಿ 71 ಜನರು ವಾಸವಿದ್ದು ಸರ್ವೆ ನಂಬರ್ 19ರಲ್ಲಿ 70 ರೈತರು ಅರಣ್ಯ ಹಕ್ಕು ಕಾಯ್ದೆಯಡಿ ಜಮೀನಿನ ಹಕ್ಕು ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಇತ್ಯರ್ಥವಾಗುವವರೆಗೂ ಮೂರು ಎಕರೆಯೊಳಗಿರುವ ರೈತರನ್ನು ಒಕ್ಕಲೆಬ್ಬಿಸಬಾರದು. ಆದರೆ ಸೊರಬ ಎಸಿಎಫ್ ರೈತರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದರು.

ಡಿಸಿ ಕಚೇರಿಗೆ ನುಗ್ಗಲು ಯತ್ನ: ಅದಕ್ಕೂ ಮುನ್ನ ಪೊಲೀಸರು ರೈತರನ್ನು ಡಿಸಿ ಕಚೇರಿ ದ್ವಾರದಲ್ಲೇ ತಡೆದರು. ಇದರಿಂದ ಆಕ್ರೋಶಗೊಂಡ ರೈತರು ಡಿಸಿ ಕಚೇರಿಗೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಮತ್ತು ರೈತರ ನಡುವೆ ವಾಗ್ವಾದವೂ ನಡೆಯಿತು. ಬಳಿಕ ಪ್ರತಿಭಟನಾ ಸ್ಥಳಕ್ಕೆ ಡಿಸಿ ಆರ್.ಸೆಲ್ವಮಣಿ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿ ಮನವಿ ಸ್ವೀಕರಿಸಿದರು. ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ತೀ.ನಾ.ಶ್ರೀನಿವಾಸ್, ಅಶೋಕ್, ಬಸವರಾಜ್, ವೀರಯ್ಯ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net