

ಶಿವಮೊಗ್ಗ: ಬೆಳಕಿನ ಹಬ್ಬ ದೀಪಾವಳಿ ಆಚರಣೆ ಮತ್ತು ಲಕ್ಷ್ಮೀಪೂಜೆಗೆ ಶಿವಮೊಗ್ಗ ಜಿಲ್ಲೆ ಸಿದ್ಧವಾಗಿದೆ. ಮಾರುಕಟ್ಟೆಗಳಲ್ಲಿ ಹೊಸ ಬಟ್ಟೆ, ಹೂ, ಹಣ್ಣು, ಪಟಾಕಿ ಸೇರಿ ಇತರೆ ವಸ್ತುಗಳ ಖರೀದಿ ಭರಾಟೆ ಕಳೆದ ಮೂರ್ನಾಲ್ಕು ದಿನಗಳಿಂದಲೇ ಜೋರಾಗಿದೆ.
ಹಿಂದುಗಳು ವಿಜೃಂಭಣೆಯಿಂದ ಆಚರಿಸುವ ದೀಪಾವಳಿ ನಿಮಿತ್ತ ಆಕಾಶಬುಟ್ಟಿ, ಬಾಳೆ-ಕಬ್ಬು, ಚೆಂಡಿನ ಹೂವು, ಸೇವಂತಿಗೆ, ಕಾಕಡ ಮುಂತಾದ ಹೂವುಗಳ ಖರೀದಿಗೆ ಜೋರಾಗಿತ್ತು. ದೀಪಾವಳಿ ಸಂಭ್ರಮಕ್ಕಾಗಿ ಜನರು ಉತ್ಸಾಹದಿಂದ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದರು. ಹಬ್ಬದ ಆಚರಣೆಗೆ ನಗರ ಸೇರಿ ಜಿಲ್ಲಾದ್ಯಂತ ಬಿರುಸಿನ ಸಿದ್ಧತೆ ನಡೆದಿದೆ.
ಶಿವಮೊಗ್ಗದ ಪ್ರಮುಖ ಮಾರುಕಟ್ಟೆ ಪ್ರದೇಶವಾದ ಗಾಂಧಿಬಜಾರ್, ನೆಹರು ರಸ್ತೆ, ಬಿ.ಎಚ್.ರಸ್ತೆ, ದುರ್ಗಿಗುಡಿ, ಸವಳಂಗ ರಸ್ತೆ, ಲಕ್ಷ್ಮೀ ಟಾಕೀಸ್, ಪೊಲೀಸ್ ಚೌಕಿ, ಗೋಪಾಳ ಸೇರಿ ಹಲವೆಡೆ ಹೂವಿನ ವ್ಯಾಪಾರ, ಹಣ್ಣು, ತರಕಾರಿ ಹಾಗೂ ಬಾಳೆ ಎಲೆ, ಬಾಳೆಕಂದುಗಳ ವ್ಯಾಪಾರ ಜೋರಾಗಿತ್ತು.
ಹಣತೆಗಳ ಮಾರಾಟ: ಬೆಳಕಿನ ಹಬ್ಬಕ್ಕೆ ಮೆರುಗು ನೀಡುವ ಹಣತೆಗಳ ಮಾರಾಟವೂ ಜೋರಾಗಿತ್ತು. ಜಿಲ್ಲೆಯ ವಿವಿಧೆಡೆ ಹಣತೆಗಳ ಮಾರಾಟಕ್ಕೆ ಇಡಲಾಗಿದೆ. ಕೆಲವಡೆ ಸಣ್ಣ ಹಣತೆಗಳು 30 ರೂ. ಡಜನ್ ಹಾಗೂ ದೊಡ್ಡ ಹಣತೆಗಳು 50 ರೂ.ಗೆ ಡಜನ್ ಮಾರಾಟ ಮಾಡಲಾಯಿತು. ವಿಧ-ವಿಧವಾದ ಹಣತೆಗಳನ್ನು ಮಾರಾಟಕ್ಕಿಡಲಾಗಿದ್ದು, ಗ್ರಾಹಕರು ತಮಗೆ ಇಷ್ಟವಾದ ಹಣತೆಗಳನ್ನು ಖರೀದಿಸಿದರು.
ಎರಡು ದಿನ ಲಕ್ಷ್ಮೀ ಪೂಜೆ
ಅಮವಾಸ್ಯೆ ಎರಡು ದಿನ ಇರುವುದಿಂದ ಈ ಬಾರಿ ಗುರುವಾರ ಸಂಜೆಯಿಂದ ಶುಕ್ರವಾರ ಮಧ್ಯಾಹ್ನದವರೆಗೆ ಲಕ್ಷ್ಮೀ ಪೂಜೆ ನೆರವೇರಲಿದೆ. ಇದಕ್ಕಾಗಿ ಜನರು ಅಗತ್ಯ ಸಿದ್ಧತೆಯಲ್ಲಿ ತೊಡಗಿದ್ದರು. ಮಾರುಕಟ್ಟೆಯಲ್ಲಿ ಹೂವು ಹಣ್ಣು ಸೇರಿ ಪೂಜೆಗೆ ಬೇಕಾದ ಅಗತ್ಯ ಸಾಮಗ್ರಿಗಳ ಖರೀದಿ ಜೋರಾಗಿತ್ತು. ಲಕ್ಷ್ಮೀಪೂಜೆಗೆ ಅಂಗಡಿ-ಮುಂಗಟ್ಟುಗಳನ್ನು ಶುಚಿಗೊಳಿಸಿ ಸುಣ್ಣ ಬಣ್ಣ ಬಳಿದು ಅಲಂಕಾರಗೊಳಿಸಲಾಗಿದೆ.