ಸೆ.3ರಂದು ಅಂತ್ಯೋದಯ ಅರಿವು ಕಾರ್ಯಾಗಾರ: ಡಿಸಿ

12 smg 8
Published on

ಶಿವಮೊಗ್ಗ: ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ್‌ಗಳು, ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಸರ್ಕಾರದ ವಿವಿಧ ಇಲಾಖೆಗಳು, ನಿಗಮ-ಮಂಡಳಿಗಳು ಅನುಷ್ಠಾನಗೊಳಿಸುವ ಯೋಜನೆ, ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವ ಒಂದು ದಿನದ ಅಂತ್ಯೋದಯ ಕಾರ್ಯಾಗಾರ ಸೆಪ್ಟಂಬರ್ 3ರಂದು ನಗರದ ಪೆಸಿಟ್ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಡಿಸಿ ಡಾ. ಆರ್.ಸೆಲ್ವಮಣಿ ಹೇಳಿದರು.

ಡಿಸಿ ಕಚೇರಿಯಲ್ಲಿ ಕಾರ್ಯಾಗಾರ ಕುರಿತು ಪೂರ್ವಸಿದ್ಧತಾ ಸಭೆ ನಡೆಸಿದ ಅವರು, ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾಯಿತ ಅಂದಾಜು 4,500 ಪ್ರತಿನಿಧಿಗಳಿಗೆ ತರಬೇತಿ ನೀಡಲಾಗುವುದು ಎಂದರು.

ಸರ್ಕಾರದ ವಿವಿಧ ಇಲಾಖೆಗಳಿಂದ ಅನುಷ್ಠಾನದಲ್ಲಿರುವ ಹಲವು ಜನಪರ ಯೋಜನೆಗಳ ಕುರಿತು ತಜ್ಞರು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳಿಂದ ಮಾಹಿತಿ ನೀಡಲಾಗುವುದು. ತರಬೇತಿ ಪಡೆದ ಪ್ರತಿನಿಧಿಗಳು ತಮ್ಮ ಕಾರ್ಯಕ್ಷೇತ್ರದಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯ ಒದಗಿಸುವಲ್ಲಿ ಸಹಕಾರಿಯಾಗಲಿದೆ ಎಂದು ಹೇಳಿದರು.

ಕಾರ್ಯಾಗಾರವನ್ನು ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಗೃಹ ಸಚಿವ ಆರಗ ಜ್ಞಾನೇಂದ್ರ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಸೇರಿದಂತೆ ಎಲ್ಲ ಶಾಸಕರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಆಗಮಿಸಲಿರುವರು ಎಂದರು.

ಉಸ್ತುವಾರಿಗಾಗಿ ಆಯಾ ತಾಪಂ ಇಒಗಳು ಸೇರಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ಇಲಾಖಾ ಯೋಜನೆಗಳ ಕುರಿತು ಜನರಲ್ಲಿ ಅರಿವು ಮೂಡಿಸಲು ಮಳಿಗೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಅಂದು ಬೆಳಗ್ಗೆ 9ರಿಂದ ನೋಂದಣಿ ನಡೆಯಲಿದೆ. ವಿವಿಧ ತಾಲೂಕುಗಳಿಂದ ಆಗಮಿಸುವ ಪ್ರತಿನಿಧಿಗಳಿಗೆ ತಾಲೂಕುವಾರು ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಎಂಎಲ್‌ಸಿ ಡಿ.ಎಸ್.ಅರುಣ್, ಎಸ್ಪಿ ಬಿ.ಎಂ.ಲಕ್ಷ್ಮಿಪ್ರಸಾದ್, ಜಿಪಂ ಪ್ರಭಾರ ಸಿಇಒ ಎನ್.ಡಿ.ಪ್ರಕಾಶ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ನಾಗರಾಜ್, ಬಿಸಿಎಂ ಅಧಿಕಾರಿ ಶೋಭಾ, ಜಿಪಂ ಉಪಕಾರ್ಯದರ್ಶಿ ಶ್ರೀಧರ್, ಜಯಲಕ್ಷ್ಮೀ, ನಗರಾಭಿವೃದ್ಧಿಕೋಶ ಜಿಲ್ಲಾ ಅಧಿಕಾರಿ ಮೂಕಪ್ಪ ಕರಭೀಮಣ್ಣನವರ್ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net