

ಶಿವಮೊಗ್ಗ: ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳ ಗಡಿಭಾಗದಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದ ಗಂಡು ಚಿರತೆಯೊಂದು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ.
ಸೋಮವಾರ ರಾತ್ರಿ ನ್ಯಾಮತಿ ತಾಲೂಕಿನ ಸಳವಂಗ ಸಮೀಪದ ಸುತ್ತುಕೋಟೆಯಲ್ಲಿ ಇರಿಸಿದ್ದ ಬೋನಿನಲ್ಲಿ ಮೂರೂವರೆ ವರ್ಷದ ಚಿರತೆ ಸೆರೆಯಾಗಿದೆ. ಬೀದಿ ನಾಯಿಯನ್ನು ಬೋನಿನಲ್ಲಿ ಇರಿಸಿ ಖೆಡ್ಡಾಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಕೆಡವಿದ್ದಾರೆ. ಚಿರತೆ ಸೆರೆಯಾದ ಸುದ್ದಿ ಎಲ್ಲೆಡೆ ಹರಡುತ್ತಿದ್ದಂತೆ ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳ ಗಡಿ ಭಾಗದ ಜನರು ನಿಟ್ಟುಸಿರುವ ಬಿಡುವಂತೆ ಆಗಿದೆ.
ಮಂಗಳವಾರ ಬೆಳಗ್ಗೆ ರೈತರೊಬ್ಬರು ಜಮೀನಿಗೆ ಹೋದಾಗ ಚಿರತೆ ಸೆರೆಯಾಗಿರುವುದು ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ಹಲವು ತಿಂಗಳಿಂದ ಗಡಿ ಭಾಗದಲ್ಲಿ ಜಾನುವಾರು, ಬೀದಿ ನಾಯಿಗಳ ಮೇಲೆ ದಾಳಿ ನಡೆಸುತ್ತಿತ್ತು.
ಮಹಿಳೆ ಕೊಂದಿದ್ದ ಚಿರತೆ ಶಂಕೆ:
ಕಳೆದೊಂದು ವಾರದ ಹಿಂದೆ ನ್ಯಾಮತಿ ತಾಲೂಕಿನ ಫಲವನಹಳ್ಳಿಯಲ್ಲಿ ಮೆಕ್ಕೆಜೋಳದಲ್ಲಿ ಕಳೆ ಕೀಳುತ್ತಿದ್ದ ಕೂಲಿ ಕಾರ್ಮಿಕ ಮಹಿಳೆ ಕಮಲಾಬಾಯಿ ಮೇಲೆ ಚಿರತೆ ದಾಳಿ ಮಾಡಿತ್ತು.100 ಅಡಿ ದೂರ ಹೊತ್ತೊಯ್ದಿದ್ದರಿಂದ ಕಮಲಾಬಾಯಿ ಕೊನೆಯುರಿರೆಳೆದಿದ್ದರು. ಘಟನೆ ಬೆನ್ನೆಲ್ಲೆ ಎಚ್ಚೆತ್ತುಕೊಂಡಿದ್ದ ಉಭಯ ಜಿಲ್ಲೆಗಳ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆಗಾಗಿ ಬೋನಿಟ್ಟಿದ್ದರು. ಕಮಲಾಬಾಯಿ ಅವರ ಮೇಲೆ ದಾಳಿ ಮಾಡಿದ ಚಿರತೆ ಇದೇ ಇರಬಹುದೆಂದು ಅರಣ್ಯ ಇಲಾಖೆ ಸಿಬ್ಬಂದಿ ಶಂಕೆ ವ್ಯಕ್ತಪಡಿಸಿದ್ದಾರೆ.
ಹೊಲ-ಗದ್ದೆಗಳಿಗೆ ತೆರಳಲು ಹಿಂದೇಟು:
ನ್ಯಾಮತಿ ತಾಲೂಕಿನ ಫಲವನಹಳ್ಳಿ, ಜೀನಹಳ್ಳಿ, ಗಡೇಕಟ್ಟೆ, ಮದೇನಹಳ್ಳಿ, ಶಿವಮೊಗ್ಗ ತಾಲೂಕಿನ ಸುತ್ತುಕೋಟೆ, ಹರಮಘಟ್ಟ, ಹಾಲದಹಳ್ಳಿ, ಸೋಮಿನಕೊಪ್ಪ, ಗೆಜ್ಜೇನಹಳ್ಳಿ ಸೇರಿ ಸುತ್ತಮುತ್ತ ಹಳ್ಳಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು ಜಾನುವಾರು ಮತ್ತು ಬೀದಿನಾಯಿಗಳನ್ನು ಭಕ್ಷಿಸುತ್ತಿತ್ತು. ಇದರಿಂದ ಗ್ರಾಮಸ್ಥರು ಹೊಲಗದ್ದೆಗಳಿಗೆ ತೆರಳಲು ಹಿಂದೇಟು ಹಾಕುವಂತಾಗಿತ್ತು. ಚಿರತೆ ಬೋನಿಗೆ ಬಿದ್ದಿರುವ ವಿಷಯ ತಿಳಿದು ಸುತ್ತಮುತ್ತಲಿನ ಗ್ರಾಮಸ್ಥರು ತಂಡೋಪತಂಡವಾಗಿ ಬಂದರು.
ದೂರ ಬಿಡಲು ಇಲಾಖೆ ಚಿಂತನೆ:
ನರಬಲಿ ಪಡೆದಿರುವ ಚಿರತೆ ಇದೇ ಎಂಬ ಶಂಕೆ ಇದ್ದು ಮತ್ತೆ ಮನುಷ್ಯರ ಮೇಲೆ ದಾಳಿ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲಾ ವ್ಯಾಪ್ತಿ ಹೊರತುಪಡಿಸಿ ಬೇರೆ ಜಿಲ್ಲೆಯ ಅರಣ್ಯ ಪ್ರದೇಶಕ್ಕೆ ಬಿಡಲು ಇಲಾಖೆ ಚಿಂತನಡೆ ನಡೆಸಿದೆ. ಆದರೆ ಎಲ್ಲಿ ಬಿಡಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ.