ಶಿವಮೊಗ್ಗದಲ್ಲಿ ನ.13ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ಸಜ್ಜು

dc dr.r.selwamani
Published on

ಶಿವಮೊಗ್ಗ: ಯುಪಿಎಸ್‌ಸಿ, ಕೆಎಎಸ್, ಎಎಸ್‌ಎಸ್‌ಸಿ ಮತ್ತು ಬ್ಯಾಂಕಿಂಗ್‌ನ ಪರೀಕ್ಷೆಗಳಿಗೆ ತರಬೇತಿ ನೀಡಲು ಅಭ್ಯರ್ಥಿಗಳ ಆಯ್ಕೆಗಾಗಿ ನ.13ರಂದು ನಗರದ 4 ಪರೀಕ್ಷಾ ಕೇಂದ್ರಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದರು.

ಡಿಸಿ ಕಚೇರಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10.30ರಿಂದ 12.30ರವರೆಗೆ ಯುಪಿಎಸ್‌ಸಿ, ಕೆಎಎಸ್ ಪರೀಕ್ಷೆಗಳು ಹಾಗೂ ಮಧ್ಯಾಹ್ನ 2.30ರಿಂದ 4.30ರವರೆಗೆ ಬ್ಯಾಂಕಿಂಗ್, ಎಎಸ್‌ಎಸ್‌ಎ ಪರೀಕ್ಷೆಗಳು ನಡೆಯುತ್ತಿವೆ. ಬೆಳಗ್ಗೆ ನಡೆಯುವ ಪರೀಕ್ಷೆಗೆ 1,656 ಪರೀಕ್ಷಾರ್ಥಿಗಳು ಹಾಗೂ ಮಧ್ಯಾಹ್ನ ನಡೆಯುವ ಪರೀಕ್ಷೆಗೆ 1,440 ಪರೀಕ್ಷಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದರು.

ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶುದ್ಧ ಕುಡಿಯುವ ನೀರು, ಶೌಚಗೃಹ, ಬೆಳಕಿನ ವ್ಯವಸ್ಥೆ ಇರುವಂತೆ ನೋಡಿಕೊಳ್ಳಲು ಹಾಗೂ ಪ್ರತಿ ಕೊಠಡಿಗೆ ಕ್ಯಾಮರಾ, ಗೋಡೆ ಗಡಿಯಾರ ಹಾಗೂ ಫ್ಯಾನ್ ಅಳವಡಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಪರೀಕ್ಷಾರ್ಥಿಗಳು ಪರೀಕ್ಷಾ ಕೊಠಡಿಯೊಳಗೆ ಮೊಬೈಲ್, ಸ್ಮಾರ್ಟ್‌ವಾಚ್ ಸೇರಿ ವಿದ್ಯುನ್ಮಾನ ಉಪಕರಣಗಳನ್ನು ಕೊಂಡೊಯ್ಯದಂತೆ ಸೂಚಿಸಲಾಗಿದೆ ಎಂದರು.

ಪರೀಕ್ಷೆಗಳು ನಡೆಯುವ ದಿನಗಳಂದು ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತದೆ. ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಅಲ್ಲದೇ ಅನವಶ್ಯಕವಾಗಿ ಗುಂಪುಗೂಡುವುದನ್ನು ನಿಷೇಧಿಸಿರುವುದಾಗಿ ತಿಳಿಸಿದರು.

ಜಿಲ್ಲಾ ಖಜಾನಾಧಿಕಾರಿ ಎಚ್.ಎಸ್.ಸಾವಿತ್ರಿ, ಡಿಎಚ್‌ಒ ಡಾ. ರಾಜೇಶ್ ಸುರಗೀಹಳ್ಳಿ, ಡಿಡಿಪಿಯು ಬಿ.ಕೃಷ್ಣಪ್ಪ ಸೇರಿದಂತೆ ಪರೀಕ್ಷಾ ಕಾರ್ಯಕ್ಕೆ ನಿಯೋಜಿತ ಅಧಿಕಾರಿ, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net