

ಶಿವಮೊಗ್ಗ: ನಗರದಲ್ಲಿ ಸಂಚಾರ ನಿಯಂತ್ರಣ ಉದ್ದೇಶದಿಂದ ಇತ್ತೀಚೆಗಷ್ಟೇ ಸಭೆ ನಡೆಸಿದ ಬೆನ್ನಲ್ಲೇ ಸಾರ್ವಜನಿಕ ಹಿತದೃಷ್ಟಿ ಮತ್ತು ಸಂಚಾರ ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ ನಗರ ಸಾರಿಗೆ ಬಸ್‌ಗಳ ನಿಲುಗಡೆಗೆ 117 ನಿಲ್ದಾಣಗಳನ್ನು ಗುರುತಿಸಿ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಶನಿವಾರ ಅಧಿಸೂಚನೆ ಹೊರಡಿಸಿದ್ದಾರೆ. ಹಾಗಾಗಿ ಇನ್ಮುಂದೆ ನಿಲ್ದಾಣಗಳನ್ನು ಹೊರತುಪಡಿಸಿ ಎಲ್ಲೆಂದರಲ್ಲಿ ಬಸ್‌ಗಳನ್ನು ನಿಲ್ಲಿಸಿದರೆ ಮಾಲೀಕರು ದಂಡನೆಗೆ ಒಳಗಾಗುವುದು ನಿಶ್ಚಿತ.
ನಗರದ ಪೂರ್ವ ಸಂಚಾರ ಮತ್ತು ಪಶ್ಚಿಮ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಪ್ರತಿ ದಿನ 61 ನಗರ ಸಾರಿಗೆ ಬಸ್‌ಗಳು ಸಂಚರಿಸುತ್ತಿವೆ. ಚಾಲಕರು ಜಿಲ್ಲಾಡಳಿತ ಪ್ರಕಟಿಸಿರುವ ನಿಲ್ದಾಣಗಳನ್ನು ಹೊರತುಪಡಿಸಿ ಪ್ರಯಾಣಿಕರು ಕೈ ತೋರಿಸಿದ ಕಡೆಗಳಲ್ಲೆಲ್ಲ ರಸ್ತೆ ಮಧ್ಯೆ ನಿಲ್ಲಿಸಿದರೆ ಹಿಂದೆ ಬರುವ ವಾಹನಗಳಿಗೆ ಸಮಸ್ಯೆಯಾಗುತ್ತಿದೆ. ಸಾರ್ವಜನಿಕರಿಗೂ ಕಿರಿಕಿರಿ ಉಂಟಾಗುತ್ತಿದೆ. ಈ ಬಗ್ಗೆ ಸಂಚಾರ ಠಾಣೆಗಳು ಮತ್ತು ಜಿಲ್ಲಾ ಕಂಟ್ರೋಲ್ ರೂಮ್‌ಗೆ ದೂರುಗಳು ಬರುತ್ತಿದ್ದು ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮಹತ್ವದ ಆದೇಶ ಹೊರಡಿಸಿದೆ.
ಬಿ.ಎಚ್.ರಸ್ತೆ, ಹೊಳೆಹೊನ್ನೂರು ರಸ್ತೆ, ಎನ್.ಆರ್.ಪುರ ರಸ್ತೆ, ಬಾಲರಾಜ್ ಅರಸ್ ರಸ್ತೆ, ಹೊನ್ನಾಳಿ ರಸ್ತೆ, ಸವಳಂಗ ರಸ್ತೆ, ವಿನೋಬನಗರ 100 ಅಡಿ ರಸ್ತೆ, ಮಿಳ್ಳಘಟ್ಟ ಕ್ರಾಸ್‌ನಿಂದ ಗೋಪಾಲಗೌಡ ಬಡಾವಣೆ, ಗೋಪಾಲಗೌಡ 100 ಅಡಿ ರಸ್ತೆ, ವಿಜಯನಗರ ಮುಖ್ಯ ರಸ್ತೆ, ತುಂಗಾನಗರ 100 ಅಡಿ ಮುಖ್ಯ ರಸ್ತೆ, ಸಾಗರ ರಸ್ತೆ, ಸೋಮಿನಕೊಪ್ಪ ರಸ್ತೆ, ಜೈಲ್ ರಸ್ತೆ, ಬೊಮ್ಮನಕಟ್ಟೆ ರಸ್ತೆ, ಎನ್.ಟಿ.ರಸ್ತೆ, ಬೈಪಾಸ್ ರಸ್ತೆಯಲ್ಲಿ ಸ್ಮಾರ್ಟ್‌ಸಿಟಿಯಿಂದ ನಿರ್ಮಿಸಿರುವ ಶೆಲ್ಟರ್‌ಗಳು ಸೇರಿದಂತೆ ಕೆಲವೊಂದು ನಿಲ್ದಾಣಗಳನ್ನು ಗುರುತಿಸಿದ್ದು, ಆ ನಿಲ್ದಾಣಗಳ ಎದುರೇ ನಗರ ಸಾರಿಗೆ ಬಸ್‌ಗಳನ್ನು ನಿಲುಗಡೆ ಮಾಡಬೇಕು ಎಂದು ಸೂಚಿಸಿದ್ದಾರೆ.