

ಶಿವಮೊಗ್ಗ: ಕೆ.ಟಿ.ಶಾಮಯ್ಯಗೌಡ ರಸ್ತೆಯಲ್ಲಿರುವ ಶಿವಮೊಗ್ಗ ಸಿಟಿ ಕ್ಲಬ್‌ಗೆ ಈಗ 100ರ ಹರೆಯ. ಈ ಹಿನ್ನೆಲೆಯಲ್ಲಿ ಕ್ಲಬ್ ಆವರಣದಲ್ಲಿ ಮೇ 11ರ ಸಂಜೆ 5ಕ್ಕೆ ಶತಮಾನೋತ್ಸವ ಸಮಾರಂಭ ಏರ್ಪಡಿಸಲಾಗಿದೆ ಎಂದು ಕ್ಲಬ್ ಗೌರವ ಕಾರ್ಯದರ್ಶಿ ಎಚ್.ಜೆ.ವಿಜಯಕುಮಾರ್ ಹೇಳಿದರು.
ಶತಮಾನೋತ್ಸವ ಸಮಾರಂಭದಲ್ಲಿ ಮೈಸೂರಿನ ಕಂಠೀರವ ನರಸಿಂಹರಾಜ ಸ್ಪೋರ್ಟ್ಸ್ ಕ್ಲಬ್ ಮಾಜಿ ಅಧ್ಯಕ್ಷ ಜಿ.ಕೆ.ಬಾಲಕೃಷ್ಣನ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಜಿಲ್ಲಾಧಿಕಾರಿ, ಕ್ಲಬ್ ಗೌರವಾಧ್ಯಕ್ಷ ಗುರುದತ್ತ ಹೆಗಡೆ ಅಧ್ಯಕ್ಷತೆ ವಹಿಸುವರು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶತಮಾನೋತ್ಸವ ಕಾರ್ಯಕ್ರಮದಲ್ಲಿ ದೀಪಕ್ ಜಯಶೀಲನ್ ತಂಡದಿಂದ ನೂರೊಂದು ನೆನಪು ಹಳೆಯ ಚಿತ್ರಗೀತೆಗಳ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಎಲ್ಲ ಕಾರ್ಯಕ್ರಮಗಳು ಕ್ಲಬ್ ಸದಸ್ಯರಿಗೆ ಮಾತ್ರ. ಶತಮಾನೋತ್ಸವದ ಅಂಗವಾಗಿ ಕ್ಲಬ್ ಸದಸ್ಯರು ಮತ್ತು ಕುಟುಂಬದವರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮೇ 10ರಂದು ಮ್ಯಾರಾಥಾನ್ ಓಟ ಏರ್ಪಡಿಸಲಾಗಿದೆ ಎಂದರು.
1924ರಲ್ಲಿ ಶಿವಮೊಗ್ಗ ಸಿಟಿ ಕ್ಲಬ್ ಆರಂಭವಾಯಿತು. ಮೊದಲಿನಿಂದಲೂ ಜಿಲ್ಲಾಧಿಕಾರಿಗಳೇ ಗೌರವಾಧ್ಯಕ್ಷರಾಗಿರುತ್ತಾರೆ. ಆರಂಭದಲ್ಲಿ ಅಧಿಕಾರಿಗಳು ಮಾತ್ರ ಸದಸ್ಯರಾಗಿದ್ದರು. ಈಗ ಸಾಮಾನ್ಯ ಜನರೂ ಸದಸ್ಯರಾಗುತ್ತಿದ್ದಾರೆ. ಪ್ರಸ್ತುತ 1,600 ಸದಸ್ಯರಿದ್ದಾರೆ ಎಂದು ತಿಳಿಸಿದರು.ಕ್ಲಬ್ ಪದಾಧಿಕಾರಿಗಳಾದ ಕಡಿದಾಳ್ ಸದಾನಂದ, ಬಳ್ಳೇಕೆರೆ ಸಂತೋಷ್, ವಿಜಯ್, ಸುನೀಲ್, ಎಂ.ಪ್ರಸನ್ನಕುಮಾರ್, ಕಿರಣ್, ತಾರಾನಾಥ್, ಕಮಲಾಕ್ಷ, ರಾಜೇಂದ್ರ ಸುದ್ದಿಗೋಷ್ಠಿಯಲ್ಲಿದ್ದರು.