

ಶಿವಮೊಗ್ಗ: ಸಿಎಫ್‌ಐ ಮತ್ತು ಪಿಎಫ್‌ಐ ಸಂಘಟನೆಗಳು ಬ್ಯಾನ್ ಆಗಿದ್ದರೂ ಶಿರಾಳಕೊಪ್ಪದಲ್ಲಿ ಗೋಡೆ ಬರಹ ಬರೆದಿರುವುದು ದುರದೃಷ್ಟಕರ. ದೇಶವಿರೋಧಿ ಚಿಂತನೆಗಳನ್ನು ಮುಸ್ಲಿಂ ಮುಖಂಡರೇ ಸರಿ ಮಾಡಬೇಕು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮನವಿ ಮಾಡಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಫ್‌ಐ, ಸಿಎಫ್‌ಐ ಸಂಘಟನೆಯನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿತ್ತು. ಇದನ್ನು ಪ್ರಶ್ನಿಸಿ ಕೆಲವರು ಕೋರ್ಟಿಗೂ ಹೋಗಿದ್ದರು. ಆದರೆ ಕೋರ್ಟ್ ಸರ್ಕಾರದ ನಿರ್ಧಾರ ಸರಿಯಾಗಿದೆ ಎಂದು ಹೇಳಿದೆ ಎಂದರು.
ದೇಶದಲ್ಲಿದ್ದು, ದೇಶ ವಿರೋಧಿ ಕೃತ್ಯ ಮಾಡುವವರ ವಿರುದ್ಧ ಕ್ರಮಕ್ಕೆ ಸರ್ಕಾರ ನಿರ್ಧರಿಸಿದೆ. ಈಗಲೂ ದೇಶ ವಿರೋಧಿ ಕೃತ್ಯಗಳು ಅಲ್ಲೊಂದು ಇಲ್ಲೋಂದು ನಡೆಯುತ್ತಿದೆ. ಅದರ ಉದಾಹರಣೆಯೇ ಶಿರಾಳಕೊಪ್ಪದಲ್ಲಿ ನಡೆದ ಘಟನೆ ಕೂಡ ಎಂದರು.
ಶಿರಾಳಕೊಪ್ಪದ ಗೋಡೆ ಬರಹದ ಬಗ್ಗೆ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ. ಇಂತಹವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಈವರೆಗೆ ಆಳ್ವಿಕೆ ನಡೆಸಿದವರು ಪೋಷಿಸಿದ ಪ್ರತಿಫಲವಾಗಿ ಇದೆಲ್ಲಾ ನಡೆಯುತ್ತಿದೆ ಎಂದರು.