

ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಭಾನುವಾರ ಸಂಜೆ ಲ್ಯಾಂಡ್ ಆಗಬೇಕಿದ್ದ ಸ್ಟಾರ್ ಏರ್‌ಲೈನ್ ವಿಮಾನ ಹವಾಮಾನ ವೈಪರೀತ್ಯ ಕಾರಣದಿಂದ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಇಳಿದಿದೆ.
ಭಾನುವಾರ ಸಂಜೆ ಶಿವಮೊಗ್ಗ ಸುತ್ತಮುತ್ತ ದಟ್ಟ ಮೋಡ, ಗಾಳಿ ಸಹಿತ ಭಾರಿ ಮಳೆಯಾಗಿತ್ತು. ಹಾಗಾಗಿ ತಿರುಪತಿಯಿಂದ ಶಿವಮೊಗ್ಗಕ್ಕೆ ಆಗಮಿಸಿದ್ದ 60 ಪ್ರಯಾಣಿಕರಿದ್ದ ಸ್ಟಾರ್ ಏರ್‌ಲೈನ್ ವಿಮಾನವು ಲ್ಯಾಂಡ್ ಆಗಲು ಸಾಧ್ಯವಾಗಿರಲಿಲ್ಲ. ಅಂತಿಮವಾಗಿ ಬೆಳಗಾವಿ ನಿಲ್ದಾಣದಲ್ಲಿ ವಿಮಾನವನ್ನು ಲ್ಯಾಂಡ್ ಮಾಡಲಾಯಿತು.
ತಿರುಪತಿಯಿಂದ ಸಂಜೆ 4.55ಕ್ಕೆ ಹೊರಟಿದ್ದ ವಿಮಾನ ಸಂಜೆ 6ಕ್ಕೆ ಶಿವಮೊಗ್ಗಕ್ಕೆ ತಲುಪಿತ್ತು. ದಟ್ಟ ಮೋಡದ ಕಾರಣದಿಂದ ವಿಮಾನ ನಿಲ್ದಾಣದ ಸುತ್ತ ಕತ್ತಲು ಆವರಿಸಿತ್ತು. ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಇಲ್ಲದ ಕಾರಣ ವಿಮಾನವನ್ನು ಬೆಳಗಾವಿ ವಿಮಾನ ನಿಲ್ದಾಣಕ್ಕೆ ತುರ್ತಾಗಿ ಡೈವರ್ಟ್ ಮಾಡಲಾಯಿತು. ಸಂಜೆ 6.30ರ ಹೊತ್ತಿಗೆ ಬೆಳಗಾವಿ ಸಾಂಬ್ರಾ ನಿಲ್ದಾಣದಲ್ಲಿ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಯಿತು.
ಬೆಳಗಾವಿಯಲ್ಲಿ ಇಳಿದ ಪ್ರಯಾಣಿಕರು ಶಿವಮೊಗ್ಗಕ್ಕೆ ತೆರಳಲು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ವಿಮಾನಯಾನ ಸಂಸ್ಥೆಗೆ ಹಲವು ಬಾರಿ ಒತ್ತಾಯಿಸಿದರು. ಕೊನೆಗೆ ವಿಮಾನಯಾನ ಸಂಸ್ಥೆಯೇ ಮೂರು ವಾಹನಗಳಲ್ಲಿ ಪ್ರಯಾಣಿಕರನ್ನು ಶಿವಮೊಗ್ಗಕ್ಕೆ ಕಳುಹಿಸಿಕೊಟ್ಟಿದೆ.
ನಮ್ಮೂರಿಗೆ ತೆರಳಲು ಸೂಕ್ತ ವ್ಯವಸ್ಥೆ ಮಾಡಿ ಎಂದು ಹಲವು ಬಾರಿ ಮನವಿ ಮಾಡಿದೆವು. ಪೊಲೀಸರಿಗೂ ಕರೆ ಮಾಡಿದ್ದೆವು. ರಾತ್ರಿ 10 ಗಂಟೆಗೆ ಬಸ್ ವ್ಯವಸ್ಥೆ ಮಾಡಲಾಯಿತು. ಮೂರು ಬಸ್‌ಗಳಲ್ಲಿ ಸೋಮವಾರ ಬೆಳಗ್ಗೆ ಶಿವಮೊಗ್ಗ ತಲುಪಿದ್ದಾಗಿ ಕೆಲ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದರು.