ತುಂಗೆ ಉಳಿಸಲು ಶೃಂಗೇರಿಯಿಂದ ಶ್ರೀಶೈಲವರೆಗೆ ಬೃಹತ್ ಜಾಥಾ

IMG_7977
Published on

ಶಿವಮೊಗ್ಗ: ದಕ್ಷಿಣ ಭಾರತದ ನದಿಗಳನ್ನು ಉಳಿಸಲು 2023ರ ಏಪ್ರಿಲ್ ನಂತರ ಶೃಂಗೇರಿಯಿಂದ ಶ್ರೀಶೈಲವರೆಗೆ ಸುಮಾರು 850 ಕಿಲೋ ಮೀಟರ್ ಬೃಹತ್ ಜಾಥಾ ಹಮ್ಮಿಕೊಳ್ಳಲಾಗುವುದು ಎಂದು ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಸಮಿತಿ ಸಂಯೋಜಕ ಬಸವರಾಜ ಪಾಟೀಲ್ ತಿಳಿಸಿದರು.

ಈಗಾಗಲೇ ರಾಷ್ಟ್ರೀಯವಾದಿ ಚಿಂತಕ ಕೆ.ಎನ್.ಗೋವಿಂದಾಚಾರ್ಯರ ನೇತೃತ್ವದಲ್ಲಿ ಗಂಗಾನದಿ ಉಳಿವಿಗಾಗಿ 450 ಕಿ.ಮೀ. ಯಶಸ್ವಿ ಪಾದಯಾತ್ರೆ ಹಮ್ಮಿಕೊಂಡಿದ್ದು ಡಿಸೆಂಬರ್‌ನಲ್ಲಿ ಮುಕ್ತಾಯಗೊಳ್ಳಲಿದೆ. ಬಳಿಕ ತುಂಗಾ ನದಿ ಸ್ವಚ್ಛತಾ ಅಭಿಯಾನ ನಡೆಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ದೇಶದಲ್ಲಿ ಬಹುತೇಕ ನದಿಗಳು ಮಲಿನಗೊಂಡಿವೆ. ಇದು ನದಿಗಳ ನೈಸರ್ಗಿಕ ಹರಿವಿಗೆ ಅಡ್ಡಿಯಾಗುತ್ತಿದೆ. ಜೀವ ನದಿಗಳ ಸಂರಕ್ಷಣೆ ಆಗದಿದ್ದರೆ ದೇಶದ ಭವಿಷ್ಯ ಮತ್ತು ನಾಗರಿಕರ ಅಸ್ತಿತ್ವಕ್ಕೆ ಗಂಡಾಂತರ ಎದುರಾಗಲಿದೆ. ರಾಜ್ಯದಲ್ಲಿ 38 ನಗರ ಮತ್ತು ಪಟ್ಟಣಗಳು ನದಿ ತಟದಲ್ಲಿದ್ದು ರಾಜಕಾಲುವೆಗಳ ಮೂಲಕ ಕೊಳಚೆ ನೀರು 17 ನದಿಗಳಿಗೆ ಸೇರುತ್ತಿದೆ. ಇತ್ತೀಚಿನ ದಿನಗಳಲ್ಲಿ ತುಂಗಾನದಿಯೂ ಕಲುಷಿತಗೊಂಡಿದ್ದು ತುಂಗೆಯ ನೀರು ಕುಡಿಯುವುದಕ್ಕಿರಲಿ, ಸ್ನಾನ ಮಾಡುವುದಕ್ಕೂ ಅಸಾಧ್ಯವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ನದಿಗಳ ಜೋಡಣೆಗೆ ವಿರೋಧ: ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿ ಆಗಿದ್ದಾಗ ನದಿಗಳ ಸ್ವಚ್ಛತೆಗಾಗಿ 2.40 ಲಕ್ಷ ಕೋಟಿ ರೂ. ವೆಚ್ಚದಲ್ಲಿ ನೀಲನಕ್ಷೆ ಸಿದ್ಧಪಡಿಸಲಾಗಿತ್ತು. ಈಗಿನ ಸರ್ಕಾರ ನದಿಗಳ ಜೋಡಣೆಗೆ ಒತ್ತು ನೀಡುತ್ತಿದೆ. ಆದರೆ ನದಿ ಜೋಡಣೆಗೆ ತಮ್ಮ ವಿರೋಧವಿದೆ ಎಂದ ಅವರು, ನದಿಗಳ ಹೆಚ್ಚುವರಿ ನೀರನ್ನು ಕೆಲ ದೇಶಗಳು ಉಪಯುಕ್ತವಾಗಿ ಬಳಕೆ ಮಾಡಿಕೊಳ್ಳುತ್ತಿವೆ. ಇದರಿಂದ ಪರಿಸರ ಹಾನಿಯನ್ನೂ ತಪ್ಪಿಸಲಾಗುತ್ತಿದೆ. ಆ ರೀತಿ ಮಾಡಿದರೆ ಅರಣ್ಯ ನಾಶ ಆಗುವುದು ತಪ್ಪಲಿದೆ ಎಂದರು.

ಪರಿಸರವಾದಿ, ನಿವೃತ್ತ ಪ್ರಾಚಾರ್ಯ ಡಾ. ಎಲ್.ಕೆ.ಶ್ರೀಪತಿ ಮಾತನಾಡಿ, ತುಂಗಾನದಿ ಈಗಾಗಲೇ ಕಲುಷಿತಗೊಂಡಿದೆ. ಕಣ್ಣಿಗೆ ಕಾಣುವ ವಸ್ತುಗಳಿಂತ ಕಾಣದೇ ಇರುವ ತ್ಯಾಜ್ಯವೇ ಹೆಚ್ಚಿದೆ. ಶಿವಮೊಗ್ಗದಲ್ಲಿ 750 ಕಿ.ಮೀ. ಯುಜಿಡಿ ಆಗಬೇಕಿದೆ. ಅದರಲ್ಲಿ 630 ಕಿ.ಮೀ. ಮಾತ್ರ ಯುಜಿಡಿ ಆಗಿದೆ. 80 ಸಾವಿರ ಮನೆಗಳಿದ್ದು 42 ಸಾವಿರ ಮನೆಗಳಿಗೆ ಯುಜಿಡಿ ಸಂಪರ್ಕ ಕಲ್ಪಿಸಿಲ್ಲ. ಅದರಲ್ಲೂ ಬಹಳಷ್ಟು ಮನೆಗಳಲ್ಲಿ ಶೌಚಗೃಹದ ನೀರು ಹೊರತುಪಡಿಸಿ ಉಳಿದೆಲ್ಲಾ ನೀರು ಚರಂಡಿ ಮೂಲಕ ನದಿಗೆ ಸೇರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಆಂದೋಲನದ ಸಹ ಸಂಯೋಜಕ ವಿನಯಚಂದ್ರ, ಸಹ ಕಾರ್ಯದರ್ಶಿ ಸಿ.ಪಿ.ಮಾಧವನ್, ನವ್ಯಶ್ರೀ ನಾಗೇಶ್, ಏಸುಪ್ರಕಾಶ್, ಕಾಂತೇಶ್ ಕದರಮಂಡಲಗಿ, ಬಾಲಕೃಷ್ಣ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net