

ಶಿವಮೊಗ್ಗ: ರಾಜ್ಯದಲ್ಲೇ ಸಂಚಲನ ಮೂಡಿಸಿದ್ದ ಬಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆ ಪ್ರಕರಣ ಮಾಸುವ ಮುನ್ನವೇ ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೊಬ್ಬ ಬಜರಂಗದಳ ಕಾರ್ಯಕರ್ತನ ಮೇಲೆ ಅನ್ಯಕೋಮಿನ ಯುವಕನೊಬ್ಬ ಮಾರಕಾಸ್ತ್ರದಿಂದ ಹಲ್ಲೆಗೆ ಯತ್ನಿಸಿದ ಘಟನೆ ಇಂದು ಬೆಳ್ಳಂಬೆಳಗ್ಗೆ ಸಂಭವಿಸಿದೆ.
ಸಾಗರ ನಗರದ ಬಿ.ಎಚ್.ರಸ್ತೆಯ ಬಸ್ ನಿಲ್ದಾಣ ಬಳಿ ಬಜರಂಗದಳ ಕಾರ್ಯಕರ್ತ ಸುನೀಲ್ ಎಂಬುವವರ ಮೇಲೆ ಸಮೀರ್ ಎಂಬಾತ ಮಚ್ಚು ಬೀಸಿದ್ದು, ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ದಾಳಿಯಿಂದ ಸುನೀಲ್ ಪಾರಾಗಿದ್ದಾರೆ. ದಾಳಿಗೆ ಯತ್ನಿಸಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ನಿನ್ನೆ(ಭಾನುವಾರ) ಶಿವಮೊಗ್ಗದಲ್ಲಿ ಶೌರ್ಯ ಸಂಚಲನ ಯಾತ್ರೆ ನಡೆದಿತ್ತು. ಇದರಲ್ಲಿ ಸುನೀಲ್ ಭಾಗವಹಿಸಿದ್ದ. ಯಾತ್ರೆಗೆ ಹೋಗುವಾಗ ಸುನೀಲ್ ಜತೆ ಕಿರಿಕ್ ಮಾಡಿ ಸಮೀರ್ ಎಸ್ಕೇಪ್ ಆಗಿದ್ದ.
ಇಂದು ಬೆಳಗ್ಗೆ ಸುನೀಲ್ ತನ್ನ ಕಚೇರಿ ಬಳಿಯಿಂದ ಮನೆಗೆ ಬೈಕ್ನಲ್ಲಿ ತೆರಳುತ್ತಿದ್ದರು. ಈ ವೇಳೆ ಸಮೀಪದಲ್ಲೇ ದ್ವಿಚಕ್ರ ವಾಹನ ನಿಲ್ಲಿಸಿಕೊಂಡು ನಿಂತಿದ್ದ ಸಮೀರ್, ಸುನೀಲ್ನನ್ನು ಕರೆದಿದ್ದಾನೆ. ಬೈಕ್ನಲ್ಲಿ ಸುನೀಲ್ ಸಮೀಪಕ್ಕೆ ಬರುತ್ತಿದ್ದಂತೆ ದ್ವಿಚಕ್ರ ವಾಹನದ ಡಿಕ್ಕಿಯಿಂದ ಮಚ್ಚು ಹೊರ ತೆಗೆದು ಸಮೀರ್ ಹಲ್ಲೆಗೆ ಯತ್ನಿಸಿದ್ದಾನೆ. ಅಷ್ಟರಲ್ಲಿ ಸುನೀಲ್ ಬೈಕ್ ಚಲಾಯಿಸಿಕೊಂಡು ಅಲ್ಲಿಂದ ತಪ್ಪಿಸಿಕೊಂಡು ಹೋಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.