ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೆ ಆಗ್ರಹಿಸಿ ಪ್ರತಿಭಟನೆ

14 smg 3
Published on

ಶಿವಮೊಗ್ಗ: ರಾಜ್ಯದ ಎಲ್ಲ ಮಹಾನಗರ ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿನ ಅಧಿಕಾರಿಗಳು, ನೌಕರರು ಹಾಗೂ ಪೌರಕಾರ್ಮಿಕರಿಗೆ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆಗಳ ಅಧಿಕಾರಿಗಳು ಮತ್ತು ನೌಕರರ ಸಂಘದ ಪದಾಧಿಕಾರಿಗಳು ಬುಧವಾರ ಡಿಸಿ ಕಚೇರಿ ಎದು ಪ್ರತಿಭಟನೆ ನಡೆಸಿದರು.

ಮಹಾನಗರ ಪಾಲಿಕೆಯಿಂದ ಡಿಸಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಆರೋಗ್ಯ ಸಂಜೀವಿನಿ ಯೋಜನೆಯನ್ನು ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತರಿಗೆ ಜಾರಿಗೊಳಿಸಿ ಸರ್ಕಾರ ಆದೇಶಿಸಿದೆ. ಅದರಂತೆ ರಾಜ್ಯದ ಎಲ್ಲ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ ಅಧಿಕಾರಿ, ನೌಕರರು ಹಾಗೂ ಪೌರ ಕಾರ್ಮಿಕರಿಗೂ ಈ ಯೋಜನೆ ಅನುಷ್ಠಾನಗೊಳಿಸಬೇಕಿದೆ ಎಂದು ಒತ್ತಾಯಿಸಿದರು.

ಮಹಾನಗರ ಪಾಲಿಕೆ ಅಧಿಕಾರಿಗಳು, ನೌಕರರು, ಪೌರ ಕಾರ್ಮಿಕರು ಪ್ರತಿನಿತ್ಯ ಸಾರ್ವಜನಿಕರೊಂದಿಗೆ ಒಡನಾಟ ಇಟ್ಟುಕೊಂಡಿರುತ್ತಾರೆ. ತೆರಿಗೆ ವಸೂಲಾತಿ, ಸ್ವಚ್ಛತೆ, ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ, ಕರೊನಾ ನಿಯಂತ್ರಣ, ಚುನಾವಣೆ ಕೆಲಸ, ನೀರು ಪೂರೈಕೆ, ಕಟ್ಟಡ-ಅಂಗಡಿ ಪರವಾನಗಿ ವಿತರಣೆ, ಬೀದಿದೀಪ ನಿರ್ವಹಣೆ ಮತ್ತು ದುರಸ್ತಿ, ಪ್ರಾಕೃತಿಕ ವಿಕೋಪ ಪರಿಹಾರ ವಿತರಣೆ, ಒಳಚರಂಡಿ ದುರಸ್ತಿ ಹಾಗೂ ನಿರ್ವಹಣೆ ಮಾಡುತ್ತಿದ್ದಾರೆ. ಮಾನಸಿಕ, ದೈಹಿಕ ಒತ್ತಡದೊಂದಿಗೆ ಆರೋಗ್ಯವನ್ನು ಹದಗೆಡಿಸಿಕೊಳ್ಳುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ವೈದ್ಯಕೀಯ ಮೊತ್ತ ಭರಿಸಲಾಗದೇ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಾಗಾಗಿ ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನ ಜಾರಿಗೊಳಿಸಿರುವ ಕಾರ್ಯಸೂಚಿಯನ್ನು ಯಥಾವತ್ತಾಗಿ ಪಾಲಿಕೆ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು, ನೌಕರರು, ಪೌರಕಾರ್ಮಿಕರಿಗೆ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಸಂಘದ ಶಿವಮೊಗ್ಗ ಶಾಖೆ ಅಧ್ಯಕ್ಷ ಮಾರಪ್ಪ, ಕಾರ್ಯದರ್ಶಿ ಗೋವಿಂದ, ಉಪಾಧ್ಯಕ್ಷ ಬಿ.ಎನ್.ವೇಣುಗೋಪಾಲ್, ಖಜಾಂಚಿ ಎಸ್.ಜಿ.ಮಂಜಣ್ಣ, ಸಹಕಾರ್ಯದರ್ಶಿ ಕೆ.ಮಂಜಣ್ಣ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net