

ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಸಜ್ಜಾಗಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಗುರುವಾರ ಮತ್ತೊಮ್ಮೆ ಭಾರತೀಯ ವಾಯು ಸೇನೆಯ ವಿಮಾನ ಪ್ರಾಯೋಗಿಕ ಪರೀಕ್ಷೆ ನಡೆಸಿ ಯಶಸ್ವಿಯಾಯಿತು. ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಎಸ್‌ಪಿಜಿ(ವಿಶೇಷ ಭದ್ರತಾ ಪಡೆ) ಪಡೆಯೂ ಬಂದಿಳಿತು.
ನವದೆಹಲಿಯಿಂದ ಬಂದ ರಷ್ಯಾ ನಿರ್ಮಿತ ಇಲ್ಯೂಷಿನ್ 76 ಮಾದರಿಯ ವಿಮಾನವು ಸೋಗನೆಯಲ್ಲಿನ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 11.30ಕ್ಕೆ ಆಗಮಿಸಿತು. ಭಾರತೀಯ ವಾಯು ಸೇನೆಯಲ್ಲಿ ಅಗತ್ಯವಿರುವ ಸರಕು ಸಾಗಣೆಗೆ ಬಳಸುವ ವಿಮಾನ ಇದಾಗಿದ್ದು ನಾಲ್ಕು ಕಾರುಗಳ ಸಹಿತ ಸಿಬ್ಬಂದಿ ಆಗಮಿಸಿದರು. ವಾಯುಸೇನೆಯ ವಿಮಾನದಿಂದ ನಾಲ್ಕು ಬುಲೆಟ್‌ಫ್ರೂಫ್ ಹೊಂದಿರುವ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಕಾರುಗಳನ್ನು ಕೆಳಗಿಳಿಸಿ ಪರಿಶೀಲನೆ ನಡೆಸಲಾಯಿತು.
ಜಿಲ್ಲಾಡಳಿತದಿಂದ ಎಸ್‌ಪಿಜಿ ತಂಡ ಭೇಟಿ: ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಸೇರಿ ಪ್ರಮುಖ ಅಧಿಕಾರಿಗಳು ಎಸ್‌ಪಿಜಿ ತಂಡವನ್ನು ಭೇಟಿ ಮಾಡಿದರು. ಬಳಿಕ ವಿಮಾನ ನಿಲ್ದಾಣದ ಟರ್ಮಿನಲ್ ಅನ್ನು ತಂಡ ಪರಿಶೀಲನೆ ನಡೆಸಿತು. ಅಲ್ಲಿಂದ ನೇರವಾಗಿ ತಮ್ಮ ವಾಹನಗಳ ಮೂಲಕವೇ ಶಿವಮೊಗ್ಗ ನಗರಕ್ಕೆ ಎಸ್‌ಪಿಜಿ ತಂಡ ತೆರಳಿತು. ಪ್ರಧಾನಿ ನರೇಂದ್ರ ಮೋದಿ ಅವರು ಫೆ.27ರಂದು ವಿಮಾನ ನಿಲ್ದಾಣದ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಹಿನ್ನೆಲೆ ವಿಮಾನ ನಿಲ್ದಾಣದ ಆವರಣದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಫೆ.21ರಂದು ದೆಹಲಿಯಿಂದ ಬಂದಿದ್ದ ಭಾರತೀಯ ವಾಯು ಸೇನೆಯ ವಿಮಾನ ರನ್ ವೇ ಮೇಲೆ ವಿವಿಧ ಬಗೆಯ ಲ್ಯಾಂಡಿಂಗ್ ಪರೀಕ್ಷೆ ನಡೆಸಿತ್ತು. ಮೊದಲ ಟ್ರಯಲ್ ರನ್ ಯಶಸ್ವಿಯಾಗಿತ್ತು. ಇದೀಗ ಎರಡನೇ ಪ್ರಾಯೋಗಿಕ ಪ್ರಯತ್ನವೂ ಯಶಸ್ವಿಯಾಗಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ವಿಮಾನ ಇಲ್ಲಿ ಬಂದಿಳಿಯುವುದಕ್ಕಿದ್ದ ಆತಂಕಗಳೆಲ್ಲವೂ ಬಹುತೇಕ ದೂರ ಆದಂತಾದವು.