ನಟಿ ಗುಂಡೇಟಿಗೆ ಬಲಿ, 25 ಮಿಸ್​​ ಕಾಲ್​! ಸುಳ್ಳು ಸುದ್ದಿ ಹಿಂದಿದ್ದ ಕಾರಣ ಬಿಚ್ಚಿಟ್ಟ ಶಿಲ್ಪಾ ಶಿರೋಡ್ಕರ್ | Shilpa Shirodkar

ವಿಜಯವಾಣಿ (45)
Published on

Shilpa Shirodkar: ಸೆಲೆಬ್ರಿಟಿಗಳು ಅಂದಮೇಲೆ ಅವರ ವಿರುದ್ಧದ ವದಂತಿಗಳು, ಕೇಳಿಬರುವ ಸುಳ್ಳು ಸುದ್ದಿಗಳು ತೀರ ಸಾಮಾನ್ಯ. ಕೆಲವರು ಇಂತಹ ವಿಚಾರಗಳಿಂದ ತೀರ ಮಾನಸಿಕ ಹಿಂಸೆಗೆ ತುತ್ತಾದರೆ, ಇನ್ನೂ ಕೆಲವರು ಇದಕ್ಕೆಲ್ಲ ಕ್ಯಾರೇ ಎನ್ನುವುದಿಲ್ಲ. ತಮ್ಮ ಸಿನಿ ಜರ್ನಿಯಲ್ಲಿ ಎದುರಾದ ದೊಡ್ಡ ವದಂತಿ ಕುರಿತು ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿರುವ ಬಾಲಿವುಡ್​ ನಟಿ ಶಿಲ್ಪಾ ಶಿರೋಡ್ಕರ್, ಅಚ್ಚರಿ ವಿಷಯವನ್ನೇ ಹಂಚಿಕೊಂಡಿದ್ದಾರೆ.

ಚಿತ್ರರಂಗದಲ್ಲಿ ಸದಾ ಒಂದಲ್ಲ ಒಂದು ರೀತಿಯ ವದಂತಿ ಹರಿಡಾಡುತ್ತಲೇ ಇರುತ್ತದೆ. ಸೆಲೆಬ್ರಿಟಿಗಳ ವೈಯಕ್ತಿಕ ಜೀವನ ಮತ್ತು ಅವರ ಮುಂಬರುವ ಪ್ರಾಜೆಕ್ಟ್​ಗಳಿಗೆ ಸಂಬಂಧಿಸಿದಿಂತೆ ಅನೇಕ ಊಹಾಪೋಹಗಳು ಓಡಾಡುತ್ತಿರುತ್ತವೆ. ಆದಾಗ್ಯೂ, ಕೆಲವರು ಮಿತಿಮೀರಿ ಕಲಾವಿದರು ಬದುಕಿದ್ದಾಗಲೇ ಅವರ ಅಗಲಿಕೆ ಕುರಿತಾಗಿ ಸುದ್ದಿ ಹರಿಡಿಸಿರುತ್ತಾರೆ. ಇದು ಆಯಾ ನಟರು ಮಾತ್ರವಲ್ಲದೇ ಅವರ ಕುಟುಂಬಸ್ಥರನ್ನು ಮಾನಸಿಕವಾಗಿ ಕುಗ್ಗಿಸಿ ಬಿಡುತ್ತದೆ. ಇಂಥದ್ದೇ ಕೆಟ್ಟ ಅನುಭವ ನಟಿ ಶಿಲ್ಪಾ ಬಾಳಿನಲ್ಲೂ ನಡೆದಿದೆ.

ಶಿಲ್ಪಾ ಜೀವಂತವಾಗಿರುವಾಗಲೇ ಅವರು ವಿಧಿವಶರಾಗಿದ್ದಾರೆ ಎಂಬ ವದಂತಿ ಅಂದಿನ ಮಟ್ಟಕ್ಕೆ ಭಾರೀ ಸುದ್ದಿಯಾಗಿತ್ತು. ಈ ಬಗ್ಗೆ ಸ್ವತಃ ನಟಿಯೇ ಮಾತನಾಡಿ, "1995ರಲ್ಲಿ, ನಾನು 'ರಘುವೀರ್' ಚಿತ್ರದ ಚಿತ್ರೀಕರಣಕ್ಕಾಗಿ ತಂಡದ ಸಮೇತ ಕುಲ್ಲು ಮನಾಲಿಗೆ ಹೋಗಿದ್ದೆವು. ಈ ವೇಳೆ ನಾನು ಶೂಟಿಂಗ್​ನಲ್ಕಿ ತೊಡಗಿದ್ದೆ. ಆಗ ನಾನು ಬದುಕಿರುವಾಗಲೇ ಮೃತಪಟ್ಟ ಸುದ್ದಿಯೊಂದು ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅಸಲಿಗೆ ಇದು ನನ್ನ ಗಮನಕ್ಕೆ ಬಂದಿರಲಿಲ್ಲ" ಎಂದಿದ್ದಾರೆ.

"ಆ ಕಾಲಕ್ಕೆ ನಮ್ಮಲ್ಲಿ ಸೆಲ್ ಫೋನ್ ಇರಲಿಲ್ಲ. ನಾನು ಶೂಟಿಂಗ್ ಸ್ಥಳದಲ್ಲಿದ್ದಾಗ, ನನ್ನ ತಂದೆ ನಾನು ಉಳಿದುಕೊಂಡಿದ್ದ ಹೋಟೆಲ್‌ಗೆ ಹಲವಾರು ಬಾರಿ ಕರೆ ಮಾಡಿದ್ದರು. ನಾನು ನಟ ಸುನೀಲ್ ಶೆಟ್ಟಿ ಅವರೊಂದಿಗೆ ಸಿನಿಮಾದ ಒಂದು ದೃಶ್ಯದಲ್ಲಿ ನಟಿಸುತ್ತಿದ್ದೆ. ಆಗ ಸೆಟ್​ನಲ್ಲಿದ್ದ ಹಲವರು ನನ್ನನ್ನು ವಿಚಿತ್ರವಾಗಿ ನೋಡುತ್ತಿದ್ದರು. ಕಾರಣ, ಅವರಿಗೆ ನನ್ನ ಅಗಲಿಕೆ ಸುದ್ದಿ ಅದಾಗಲೇ ತಿಳಿದಿತ್ತು. ನಾನೇ ನಿಜವಾದ ಶಿಲ್ಪಾನಾ ಎಂಬ ಗೊಂದಲ ಅವರಲ್ಲಿ ಕಾಡತೊಡಗಿತ್ತು" ಎಂದರು.

25 ಮಿಸ್ಡ್ ಕಾಲ್​

"ಇದಾದ ಬಳಿಕ ಶೂಟಿಂಗ್ ಮುಗಿಸಿ ನಾನು ಹೋಟೆಲ್ ರೂಮ್​ಗೆ ಹೋದೆ. ಆಗ ನನ್ನ ಫೋನ್​ಗೆ ಸುಮಾರು 25 ಮಿಸ್ಡ್ ಕಾಲ್‌ಗಳು ಬಂದಿದ್ದವು. ನನ್ನ ಸಾವಿನ ಸುದ್ದಿ ಪತ್ರಿಕೆಯಲ್ಲಿ ನೋಡಿ ನನ್ನ ಹೆತ್ತವರು ತುಂಬಾ ಚಿಂತಿತರಾಗಿದ್ದರು. ಅಷ್ಟಕ್ಕೂ ಈ ಗಾಸಿಪ್ ಹರಡಿದವರು ಹೊರಗಿನವರಲ್ಲ. ಬದಲಿಗೆ, ನಮ್ಮ ಚಿತ್ರತಂಡದವರೇ. ನಮ್ಮ ಸಿನಿಮಾ ನಿರ್ಮಾಪಕರಾದ ಗುಲ್ಶನ್ ಕುಮಾರ್ ಇದಕ್ಕೆ ಕಾರಣರಾಗಿದ್ದರು. ಆಗ ಯಾವುದೇ ಪಿಆರ್ ಸ್ಟಂಟ್‌ಗಳು ಇರಲಿಲ್ಲ. ನಮ್ಮ ಚಿತ್ರದ ಪ್ರಚಾರಕ್ಕಾಗಿ ಇಂತಹ ಸಾಹಸಕ್ಕೆ ಕೈಹಾಕಿದ್ದರು. ಅಸಲಿಗೆ ಈ ವಿಷಯ ನನ್ನ ಅನುಮತಿ ಇಲ್ಲದೆ ನಡೆದಿರುವುದು" ಎಂದು ನಟಿ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net