ಆ ಬ್ಲಾಕ್​ಬಸ್ಟರ್​ ಹಾಡಿಗೆ ನಾನು ಹೆಜ್ಜೆ ಹಾಕಬೇಕಿತ್ತು! ಮಲೈಕಾ ಅಲ್ಲ: ಶಾಕಿಂಗ್ ವಿಚಾರ ಬಿಚ್ಚಿಟ್ಟ ಶಿಲ್ಪಾ ಶಿರೋಡ್ಕರ್ | Opportunity

ವಿಜಯವಾಣಿ - 2024-12-09T211327.783
Published on

ಮುಂಬೈ: 1998ರಲ್ಲಿ ಬಿಡುಗಡೆಗೊಂಡ ಸೂಪರ್​ ಹಿಟ್​ ಹಿಂದಿ ಚಿತ್ರ 'ದಿಲ್​ಸೇ'. ಬಾಲಿವುಡ್​ ಕಿಂಗ್ ಖಾನ್ ಶಾರುಖ್ ಮತ್ತು ಮನೀಶಾ ಕೊಯಿರಲಾ ಮುಖ್ಯಭೂಮಿಕೆಯಲ್ಲಿ ಅಭಿನಯದ ಮ್ಯೂಸಿಕಲ್, ಲವ್ ಸಿನಿಮಾ, ಹಾಡಿನಿಂದ ಹಿಡಿದು ಕಥೆ, ಸಂಭಾಷಣೆ ಎಲ್ಲವೂ ಅಂದು ಚಿತ್ರರಸಿಕರ ಮನಗೆದ್ದಿತು. ಇಂದಿಗೂ ಈ ಚಿತ್ರದ ಗೀತೆಗಳು ಹಸಿರಾಗಿದ್ದು, ಅಭಿಮಾನಿಗಳು ಒಂದಷ್ಟು ದೃಶ್ಯಗಳನ್ನು ಮರೆತಿಲ್ಲ. ಶಾರುಖ್​ ಸಿನಿ ವೃತ್ತಿಗೆ ಹೊಸ ಮೈಲಿಗಲ್ಲು ತಂದುಕೊಟ್ಟ ದಿಲ್​ಸೇ ಚಿತ್ರತಂಡ, ಓರ್ವ ನಟಿಯ ಅವಕಾಶವನ್ನು (Opportunity) ಕಸಿದುಕೊಂಡಿತು ಎಂಬ ಸುದ್ದಿ ಸದ್ಯ ಅನೇಕರಲ್ಲಿ ಅಚ್ಚರಿ ಮೂಡಿಸಿದೆ.

ಟಾಲಿವುಡ್​ ಹೀರೋ ಮಹೇಶ್​ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಅವರ ಸಹೋದರಿ ನಟಿ ಶಿಲ್ಪಾ ಶಿರೋಡ್ಕರ್ ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ಟಾಪ್ ಹೀರೋಯಿನ್ ಆಗಿ ಮಿಂಚಿದವರು. ಆದರೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಚಿತ್ರರಂಗದಿಂದ ದೂರ ಉಳಿದರು. ಸದ್ಯ ತಮ್ಮ ಆನ್-ಸ್ಕ್ರೀನ್ ಮತ್ತು ಆಫ್-ಸ್ಕ್ರೀನ್ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿರುವ ನಟಿ, ಶಾರುಖ್​ ಚಿತ್ರದಲ್ಲಿ ತನ್ನ ಪಾಲಾಗಬೇಕಿದ್ದ ಆಫರ್​ ಬೇರೊಬ್ಬರಿಗೆ ಹೋಗಿದ್ದರ ಕುರಿತು ಇದೀಗ ಕಡೆಗೂ ಮೌನ ಮುರಿದಿದ್ದಾರೆ.

ಇದ್ದಕ್ಕಿದ್ದಂತೆ ಕೈಬಿಟ್ಟರು

"ದಿಲ್​ಸೇ ಚಿತ್ರದ ಚೈಯಾ ಚೈಯಾ ಬ್ಲಾಕ್​ಬಸ್ಟರ್​ ಹಾಡಿಗೆ ಮೊದಲ ಆಯ್ಕೆ ಮಲೈಕಾ ಅರೋರ ಅಲ್ಲ. ಈ ಹಾಡಿನ ಚಿತ್ರೀಕರಣ ಒಂದು ವಾರಕ್ಕೆ ನಿಗದಿಯಾಗಿತ್ತು. ಫರಾ ಖಾನ್ ನನ್ನ ಬಳಿ ಬಂದು ಸ್ವಲ್ಪ ತೂಕ ಇಳಿಸಿಕೊಳ್ಳುವಂತೆ ಹೇಳಿದರು. ನಾನು ಇದಕ್ಕೆ ಒಪ್ಪಿದ್ದೆ. ಆದರೆ, ಹೀಗೆ ಹೇಳಿ ಒಂದು ವಾರ ಕಳೆಯುವುದರೊಳಗೆ ಅವರು ನನ್ನನ್ನು ಕೈಬಿಟ್ಟು, ಮಲೈಕಾರನ್ನು ಆಯ್ಕೆ ಮಾಡಿಕೊಂಡಿದ್ದರು. ನೀವು ತುಂಬಾ ದಪ್ಪಗಿದ್ದೀರಿ, ಆ ಹಾಡಿಗೆ ಸೂಕ್ತವಲ್ಲ ಎಂದು ಫರಾ ಹೇಳಿದರು. ನನ್ನನ್ನು ಕೈಬಿಡಲು ಅದೇ ಅಸಲಿ ಕಾರಣವೇ ಅಥವಾ ಬೇರೆ ಏನಾದರೂ ಇತ್ತಾ ಅಂತ ಫರಾ ಮತ್ತು ನಿರ್ದೇಶಕ ಮಣಿರತ್ನಂ ಅವರೇ ಹೇಳಬೇಕು" ಎಂದು ಶಿಲ್ಪಾ ವ್ಯಂಗ್ಯವಾಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net