ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್​ ಕುಂದ್ರಾ ಅರೆಸ್ಟ್​: ಅಶ್ಲೀಲ ಸಿನಿಮಾ ತಯಾರಿಸಿ ಪ್ರಸಾರ ಮಾಡುತ್ತಿದ್ದ ಆರೋಪ

Shilpa
Published on

ನವದೆಹಲಿ: ಚಿತ್ರರಂಗ ಹಾಗೂ ಉದ್ಯಮ ಕ್ಷೇತ್ರದ ಗಮನ ಸೆಳೆಯುವಂಥ ಬೆಳವಣಿಗೆಯೊಂದು ಇಂದು ನಡೆದಿದೆ. ನಟಿ ಶಿಲ್ಪಾ ಶೆಟ್ಟಿ ಅವರ ಪತಿ, ಉದ್ಯಮಿಯೂ ಆಗಿರು ರಾಜ್​ ಕುಂದ್ರಾ ಅವರನ್ನು ಮುಂಬೈ ಕ್ರೈಂ ಬ್ರ್ಯಾಂಚ್​ ಪೊಲೀಸರು ಬಂಧಿಸಿದ್ದಾರೆ.

ಅಶ್ಲೀಲ ಸಿನಿಮಾಗಳನ್ನು ತಯಾರಿಸಿ ಅವುಗಳನ್ನು ಕೆಲವು ಆ್ಯಪ್​ಗಳ ಮೂಲಕ ಪ್ರಸಾರ ಮಾಡುತ್ತಿದ್ದ ಆರೋಪ ಅವರ ಮೇಲಿದೆ. ಅದರ ರೂವಾರಿ ಅವರು ಎಂಬ ಬಗ್ಗೆ ಸಾಕಷ್ಟು ಸಾಕ್ಷ್ಯಗಳು ಲಭಿಸಿದ ಆಧಾರದ ಮೇರೆಗೆ ಅವರನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

ಅಶ್ಲೀಲ ಸಿನಿಮಾಗಳನ್ನು ಕೆಲವು ಆ್ಯಪ್​ಗಳ ಮೂಲಕ ಪ್ರಸಾರ ಮಾಡುತ್ತಿರುವ ಕುರಿತು 2021ರ ಫೆಬ್ರವರಿಯಲ್ಲಿ ಮುಂಬೈ ಕ್ರೈಂ ಬ್ರ್ಯಾಂಚ್​ನಲ್ಲಿ ಕೇಸು ದಾಖಲಾಗಿತ್ತು. ಇದೇ ವಿಷಯಕ್ಕೆ ಸಂಬಂಧಿಸಿದಂತೆ 2021ರ ಜುಲೈ 19ರಂದು ರಾಜ್​ ಕುಂದ್ರಾ ವಿರುದ್ಧ ದೂರು ದಾಖಲಾಗಿತ್ತು. ಈ ಎಲ್ಲದರ ಹಿನ್ನೆಲೆಯಲ್ಲಿ ತನಿಖೆ ನಡೆಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ರಾಜ್​ ಕುಂದ್ರಾ ಅವರನ್ನು ಬಂಧಿಸಿದ್ದಾರೆ.

ರಾಜ್​ ಕುಂದ್ರಾ 2009ರಲ್ಲಿ ನಟಿ ಶಿಲ್ಪಾ ಶೆಟ್ಟಿ ಅವರನ್ನು ಮದುವೆಯಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇದಕ್ಕೂ ಮೊದಲು ರಾಜ್​, ಕವಿತಾ ಎಂಬವರನ್ನು ಮದುವೆಯಾಗಿದ್ದು, ಆ ದಾಂಪತ್ಯಕ್ಕೆ ಒಂದು ಹೆಣ್ಣು ಮಗು ಜನಿಸಿತ್ತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net