

ಬೆಂಗಳೂರು: ಶಿಗ್ಗಾಂವಿ ಉಪಚುನಾವಣೆಯಲ್ಲಿ (Shiggaon Bypoll) ಸ್ಫರ್ಧಿಸಲು ಟಿಕೆಟ್ ಸಿಗದಿದ್ದಕ್ಕೆ ಅಸಮಾಧಾನಗೊಂಡು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಅವರ ಮನವೊಲಿಸುವಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಯಶಸ್ವಿಯಾಗಿದ್ದು, ಕಾಂಗ್ರೆಸ್ ಪಾಳಯಕ್ಕೆ ಎದುರಾಗಿದ್ದ ಕಂಟಕವೊಂದು ದೂರಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸಿಎಂ ಸಿದ್ದರಾಮಯ್ಯ (CM Siddaramaiah), ಶಿಗ್ಗಾಂವ್ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಅಜ್ಜಂಪೀರ್ ಖಾದ್ರಿ ಅವರ ಜೊತೆ ಮಾತುಕತೆ ನಡೆಸಿ, ಪಕ್ಷದ ಹಿತದೃಷ್ಟಿಯಿಂದ ನಾಮಪತ್ರ ಹಿಂಪಡೆಯುವಂತೆ ತಿಳಿಸಿದೆ. ಈ ವೇಳೆ ಅವರು ತಮ್ಮ ನಾಮಪತ್ರ ಹಿಂಪಡೆಯುವ ಜೊತೆಗೆ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಸಕ್ರಿಯವಾಗಿ ಕೆಲಸ ಮಾಡುವುದಾಗಿ ವಾಗ್ದಾನ ನೀಡಿರುವುದಾಗಿ ತಿಳಿಸಿದ್ದಾರೆ.
ಟಿಕೆಟ್ ಸಿಗದಿದ್ದಕ್ಕೆ ಅಸಮಾಧಾನಗೊಂಡಿರುವ ಅಜ್ಜಂಪೀರ್ ಖಾದ್ರಿ ಮನವೊಲಿಸಲು ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmad Khan) ಕಸರತ್ತು ನಡೆಸಿದ್ದರು. ಆದರೆ ಸಂಧಾನ ವಿಫಲವಾಗಿದ್ದು, ಖಾದ್ರಿ ಕೊನೆ ಕ್ಷಣದಲ್ಲಿ ಬೈಕ್ನಲ್ಲಿ ದಾಖಲೆ ಹಿಡಿದು ನಾಮಪತ್ರ ಸಲ್ಲಿಕೆ ಮಾಡಿದ್ದರು. ಇನ್ನು ಸಂಧಾನಕ್ಕೆ ಬಂದಿದ್ದ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಕಾರಿನ ಮೇಲೆ ಖಾದ್ರಿ ಅಭಿಮಾನಿಗಳು ಕಲ್ಲು ತೂರಾಟ ನಡೆಸಿದ್ದರು. ಇದರಿಂದ ಕಾರಿನ ಗಾಜು ಪುಡಿಪುಡಿಯಾಗಿತ್ತು.
ಈ ವಿಚಾರವನ್ನು ತಿಳಿದ ಸಿಎಂ ಸಿದ್ದರಾಮಯ್ಯ (CM Siddaramaiah) ಅಜ್ಜಂಪೀರ್ ಖಾದ್ರಿ ಅವರನ್ನು ಕರೆಸಿ ಮಾತುಕತೆ ನಡೆಸಿದ್ದು, ನಾಮಪತ್ರ ಹಿಂಪಡೆಯುವಂತೆ ಸೂಚಿಸಿ ಬಂಡಾಯವನ್ನು ಶಮನಗೊಳಿಸಿದ್ದಾರೆ. ಇದರಿಂದ ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಮತ ವಿಭಜನೆಯ ಆತಂಕ ದೂರಾಗಿದೆ. ಆದರೆ, ಟಿಕೆಟ್ ಸಿಗದಿದ್ದಕ್ಕೆ ಅಸಮಾಧಾನಗೊಂಡು ಬಂಡಾಯ ಸಾರಿರುವ ಮಂಜುನಾಥ್ ಕುನ್ನೂರು ಅವರ ಮನವನ್ನು ರಾಜ್ಯ ಕಾಂಗ್ರೆಸ್ ನಾಯಕರು ಒಲಿಸುತ್ತಾರಾ ಇಲ್ಲವಾ ಎಂದು ಕಾದುನೋಡಬೇಕಿದೆ.