

ಇಸ್ಲಾಮಾಬಾದ್: ಪಾಕಿಸ್ತಾನದ ಸಂಸತ್ನಲ್ಲಿ ‘ವಿಶ್ವಾಸ’ ಕಳೆದುಕೊಂಡು ಇಮ್ರಾನ್ ಖಾನ್ ಪದಚ್ಯುತರಾದ ಬೆನ್ನಲ್ಲೇ ನೂತನ ಪ್ರಧಾನಿ ಗಾದಿಗೆ ಸ್ಪರ್ಧೆ ಶುರುವಾಗಿದೆ. ನಿರೀಕ್ಷೆಯಂತೆ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಸೋಮವಾರ ಮಧ್ಯಾಹ್ನ ನಿಗದಿಯಾಗಿರುವ ಚುನಾವಣೆಗೆ ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಕಿರಿಯ ಸಹೋದರ ಶೆಹಬಾಜ್ ಷರೀಫ್ ನಾಮನಿರ್ದೇಶನಗೊಂಡಿದ್ದಾರೆ. ಇನ್ನು ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್ ಎ ಇನ್ಸಾಫ್ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ಷಾ ಖುರೇಷಿ ಕಣಕ್ಕಿಳಿದಿದ್ದರೂ ಸಂಖ್ಯಾ ಬಲವಿರುವ ಶೆಹಬಾಜ್ ಪ್ರಧಾನಿ ಗಾದಿಗೇರುವುದು ಬಹುತೇಕ ನಿಶ್ಚಿತವಾಗಿದೆ. ಆದರೆ ಪಾಕಿಸ್ತಾನದ ರಾಜಕೀಯ ಇತಿಹಾಸ ಕೆದಕಿದಾಗ ಕೊನೇ ಘಳಿಗೆಯಲ್ಲಿ ಯಾವುದೇ ಪವಾಡವಾದರೂ ಅಚ್ಚರಿಯಿಲ್ಲ.
ಮೊದಲ ಕಾಶ್ಮೀರ ನುಡಿ: ‘ದೇಶದ ಸಾಮರಸ್ಯ. ನನ್ನ ಮೊದಲ ಆದ್ಯತೆ, ಭಾರತದ ಜತೆ ಶಾಂತಿ ಬಯಸುತ್ತೇವೆ. ಆದರೆ ಕಾಶ್ಮೀರ ವಿವಾದ ನಿರ್ಣಯವಾಗುವವರೆಗೂ ಇದು ಅಸಾಧ್ಯ’ ಪ್ರಧಾನಿಗಾದಿಯ ಚುನಾವಣೆಗೆ ಮುನ್ನವೇ ಶೆಹಬಾಜ್ ನೀಡಿರುವ ಈ ಹೇಳಿಕೆ ಹಲವು ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಇನ್ನು ಇಮ್ರಾನ್ ಪದಚ್ಯುತಿ ಬಳಿಕ ಭಾರತ-ಪಾಕ್ ನಡುವೆ ಹೊಸ ಮಾತುಕತೆ, ರಾಜತಾಂತ್ರಿಕ ಸಂಬಂಧಗಳಿಗೆ ಅವಕಾಶ ಸಿಗುವುದೇ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಪಾಕಿಸ್ತಾನದ ಪ್ರಜಾಪ್ರಭುತ್ವ ಸೇನಾ ಹಿಡಿತದಲ್ಲಿರುವಂಥದ್ದು. ಆ ದೇಶದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಮಂತ್ರಿಯನ್ನು ಅವಿಶ್ವಾಸ ಗೊತ್ತುವಳಿ ಮಂಡಿಸಿ ಪದಚ್ಯುತಗೊಳಿಸಲಾಗಿದೆ. ಆದಾಗ್ಯೂ, ಸೇನಾ ಹಿಡಿತ ತಪ್ಪಿಲ್ಲ ಎಂಬುದು ವಾಸ್ತವ. ಇತ್ತೀಚೆಗೆ ಇಮ್ರಾನ್ ಖಾನ್ ಭಾರತದ ವಿದೇಶ ನೀತಿಯನ್ನು ಶ್ಲಾಘಿಸಿದ್ದರು. ರಾಜಕೀಯ ಇಚ್ಛಾಶಕ್ತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇವೆಲ್ಲವೂ ಖಾನ್ ಹಿನ್ನಡೆಗೆ ಕಾರಣವಾಗಿರಬಹುದು. ಹಾಗೆಂದು ಖಾನ್ ಭಾರತದ ಪರವಾಗಿ ಇರಲಿಲ್ಲ. ಈಗ ರಾಜತಾಂತ್ರಿಕ ಸಂಬಂಧ ವೃದ್ಧಿಗೆ ಅವಕಾಶ ಸಿಕ್ಕರೂ ಸಿಗಬಹುದು ಎಂಬುದು ಪರಿಣತರ ಅಭಿಪ್ರಾಯ.
ಅವಧಿ ಅಪೂರ್ಣ: ಪಾಕಿಸ್ತಾನದ 75 ವರ್ಷಗಳ ಇತಿಹಾಸದಲ್ಲಿ ಈವರೆಗೂ ಯಾವುದೇ ಪ್ರಧಾನಿ ಐದು ವರ್ಷದ ಅವಧಿ ಪೂರ್ಣಗೊಳಿಸಿಲ್ಲ.
ಶೆಹಬಾಜ್ ಯಾರು?: ನವಾಜ್ ಷರೀಫ್ರಷ್ಟು ಪ್ರಭಾವಿ ಅಲ್ಲದ, ಮರಿಯಂ ನವಾಜ್ ರಷ್ಟು ಜನಪ್ರಿಯರೂ ಅಲ್ಲದ ಶೆಹಬಾಜ್ ಷರೀಫ್, ಪರಿಣತ ಆಡಳಿತಗಾರನೆಂದು ಹೆಸರು ಪಡೆದವರು. ವ್ಯಾಪಾರೋದ್ಯಮಿಗಳ ಕುಟುಂಬದಲ್ಲಿ ಜನಿಸಿದ ಶೆಹಬಾಜ್, ಉದ್ಯಮದ ಕಡೆಗೆ ಹೆಚ್ಚು ಒಲವುಳ್ಳವರಾಗಿದ್ದರು. 2017ರಲ್ಲಿ ನವಾಜ್ ಷರೀಫ್ ಅವರನ್ನು ಪದಚ್ಯುತಗೊಳಿಸಲಾಗಿತ್ತು. ಭ್ರಷ್ಟಾಚಾರದ ಆರೋಪ ಹೊರಿಸಲಾಗಿತ್ತು. ಶೆಹಬಾಜ್ ಅಂದಿನಿಂದ ಪಿಎಂಎಲ್ ಎನ್ನ ಅಧ್ಯಕ್ಷರಾಗಿ ಮತ್ತು ವಿಪಕ್ಷ ನಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನವಾಜ್ ಷರೀಫ್ ಅವರಂತೆ ಶೆಹಬಾಜ್ ವಿರುದ್ಧವೂ ಭ್ರಷ್ಟಾಚಾರದ ಆರೋಪಗಳಿವೆ.