ಕಾಲು ಬಾಯಿ ಜ್ವರ ನಿರ್ಮೂಲನೆಗೆ ಸಹಕರಿಸಿ

10HDK 01
Published on

ಎಚ್.ಡಿ. ಕೋಟೆ: ರಾಜ್ಯದಲ್ಲಿ 2030ರೊಳಗೆ ಕಾಲು ಬಾಯಿ ಜ್ವರ ರೋಗವನ್ನು ನಿರ್ಮೂಲನೆ ಮೂಡಲು ಪ್ರತಿ ವರ್ಷ ಎರಡು ಬಾರಿ ಜಾನುವಾರುಗಳಿಗೆ ಲಸಿಕೆ ಹಾಕಲಾಗುತ್ತಿದೆ. ಎಲ್ಲ ಪಶುಸಂಗೋಪಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಪಶು ಸಂಗೋಪನಾ ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ. ಪ್ರಸನ್ನ ತಿಳಿಸಿದರು.

ತಾಲೂಕಿನ ಮಾದಾಪುರ ಗ್ರಾಮದಲ್ಲಿ ಮಂಗಳವಾರ ಮೈಸೂರಿನ ಗಂಗಾ ಚಾರಿಟಬಲ್ ಟ್ರಸ್ಟ್, ಕರ್ನಾಟಕ ಕುರಿ ಮತ್ತು ಉಣ್ಣೆ ಅಬಿವೃದ್ಧಿ ನಿಗಮ, ಎಚ್.ಡಿ.ಕೋಟೆ ಪಶು ಸಂಗೋಪನಾ ಇಲಾಖೆ ಮತ್ತು ನಾಗರಹೊಳೆ ಕುರಿ ಮತ್ತು ಮೇಕೆ ರೈತ ಉತ್ಪಾದಕ ಕಂಪನಿ ವತಿಯಿಂದ ಆಯೋಜಿಸಿದ್ದ ಕುರಿ ಮೇಕೆ ಸಾಕಣೆ ಮತ್ತು ಮೇವು ನಿರ್ವಹಣೆ ಕುರಿತ ಎರಡು ದಿನಗಳ ಉಚಿತ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಇಲಾಖೆಯು ಕಾಲು ಬಾಯಿ ಜ್ವರದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಟ ನಡೆಸುತ್ತಿದೆ. ರೈತರು ಇದಕ್ಕೆ ಪ್ರೋತ್ಸಾಹ ನೀಡಬೇಕು. ತಾಲೂಕಿನಲ್ಲಿ 110 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, ಪ್ರತಿ ಹಳ್ಳಿಯಲ್ಲಿ 400 ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಒಟ್ಟಾರೆ 90 ಸಾವಿರ ಲೀಟರ್ ಹಾಲು ತಾಲೂಕಿನಲ್ಲಿ ಉತ್ಪಾದನೆಯಾಗುತ್ತಿದೆ ಎಂದರು.

ಸರಗೂರಿನ ಪಶುವೈದ್ಯಾಧಿಕಾರಿ ವೈ.ಡಿ.ರಾಜಣ್ಣ ಮಾತನಾಡಿ, ರೈತರು ವ್ಯವಸಾಯದ ಜತೆಗೆ ಮೇಕೆ, ಕುರಿ ಸಾಕಣೆ ಮಾಡಿದರೆ ಹೆಚ್ಚಿನ ಆದಾಯ ಗಳಿಸಬಹುದು. ಹಾಲು, ಮೊಟ್ಟೆ, ಮಾಂಸದ ಬೆಲೆ ಯಾವತ್ತೂ ಇಳಿಕೆ ಕಂಡಿಲ್ಲ. ಬದಲಾಗಿ ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುತ್ತಿದೆ. ಆದ್ದರಿಂದ ರೈತರು ಮಾಂಸಕ್ಕಾಗಿ ಕುರಿ, ಮೇಕೆ, ಹಂದಿ, ಕೋಳಿ ಸಾಕಣೆಗೆ ಹೆಚ್ಚು ಒತ್ತು ನೀಡಬೇಕು. ಇದಕ್ಕಾಗಿ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಅಲ್ಲದೆ ಹಸು ಸಾಕಣೆಯಿಂದ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಜಮೀನಿಗೆ ಸಾವಯವ ಗೊಬ್ಬರ ಯಥೇಚ್ಛವಾಗಿ ದೊರೆಯುವುದರಿಂದ ಭೂಮಿಯ ಫಲವತ್ತತೆ ಸಹ ಹೆಚ್ಚುತ್ತದೆ ಎಂದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಜಯರಾಮಯ್ಯ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಿರಿಧಾನ್ಯಗಳನ್ನು ಬೇಕರಿಗಳಲ್ಲಿ ಬಳಸಲಾಗುತ್ತಿದೆ. ಪ್ರಸ್ತುತ ಸಿರಿಧಾನ್ಯಕ್ಕೆ ಬೇಡಿಕೆ ಹೆಚ್ಚಿರುವುದರಿಂದ ಸಿರಿಧಾನ್ಯ ಬೆಳೆಯುವ ರೈತರಿಗೆ ಸಹಾಯಧನದ ರೂಪದಲ್ಲಿ 30 ಲಕ್ಷ ರೂ.ವರೆಗೆ ಸಾಲ ಸೌಲಭ್ಯ ದೊರೆಯುತ್ತದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ನಾಗರಹೊಳೆ ಕುರಿ ಮತ್ತು ಮೇಕೆ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಸಿ.ಎಂ. ಯಶವಂತ, ಉಪಾಧ್ಯಕ್ಷ ಎಂ. ಶಿವಶಂಕರ, ಸಿಇಒ ಕೆ. ಕಾವ್ಯಾ, ಕಾರ್ಯದರ್ಶಿ ರವಿ ಮಟಕೆರೆ, ರಾಜ್ಯ ಪರ್ವದ ಕಾರ್ಯದರ್ಶಿ ನವೀನ್‌ಗೌಡ, ಕಾಮಯ್ಯ, ದಿವ್ಯಶ್ರೀ, ಶಿವರಾಮೇಗೌಡ, ಚಂದ್ರಶೇಖರ, ಚಿಕ್ಕಲಿಂಗೇಗೌಡ ಸೇರಿದಂತೆ 300ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net