

Mosquito Bite | ಸೊಳ್ಳೆಗಳು ತುಂಬಾ ಅಪಾಯಕಾರಿ. ಅವುಗಳ ಕಡಿತವು ಒಮ್ಮೊಮ್ಮೆ ಅನೇಕ ಗಂಭೀರ ಮತ್ತು ಮಾರಕ ಕಾಯಿಲೆಗಳಿಗೆ ಕಾರಣವಾಗಬಹುದು. WHO ಪ್ರಕಾರ, ಸೊಳ್ಳೆಗಳು ಪ್ರಪಂಚದಾದ್ಯಂತ ಪ್ರತಿ ವರ್ಷ ಸುಮಾರು 7 ಲಕ್ಷ ಜನರ ಸಾವಿಗೆ ಕಾರಣವಾಗುತ್ತವೆ. ನಮ್ಮಲ್ಲಿ ಹೆಚ್ಚಿನವರು ಸೊಳ್ಳೆ ಕಡಿತವನ್ನು ನಿರ್ಲಕ್ಷಿಸುತ್ತೇವೆ, ಆದರೆ ಕೆಲವೊಮ್ಮೆ ಈ ಸಣ್ಣ ವಿಷಯವು ದೊಡ್ಡ ಸಮಸ್ಯೆಯಾಗಬಹುದು. ಅದೇ ರೀತಿಯಾಗಿ ಸೊಳ್ಳೆಯ ಕಡಿತದಿಂದ ನಡೆಯಲು ಸಾಧ್ಯವಾಗದೆ 9 ವರ್ಷದ ಬಾಲಕಿಯೊಬ್ಬಳು ಆಸ್ಪತ್ರೆಗೆ ದಾಖಲಾದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಇದು ಸಾಮಾನ್ಯ ಜನರಿಗೆ ಎಚ್ಚರಿಕೆಯಂತಿದೆ.
ಹುಡುಗಿಗೆ ಏನಾಯಿತು?
9 ವರ್ಷದ ಬಾಲಕಿ ಅವಾ ತನ್ನ ಕುಟುಂಬದೊಂದಿಗೆ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನಲ್ಲಿರುವ ಕ್ಯಾಂಪ್‌ಸೈಟ್‌ಗೆ ಹೋಗಿದ್ದಳು. ಅಲ್ಲಿ ಅವಳಿಗೆ ಸೊಳ್ಳೆ ಕಚ್ಚಿದ್ದು, ಮೊದಲಿಗೆ ಎಲ್ಲವೂ ಸರಿಯಾಗಿತ್ತು. ಆದರೆ ಹುಡುಗಿ ಸುಳ್ಳೆ ಕಚ್ಚಿದ ಜಾಗವನ್ನು ಪದೇ ಪದೇ ಕೆರೆದುಕೊಳ್ಳಲು ಪ್ರಾರಂಭಿಸಿದಾಗ, ಪರಿಸ್ಥಿತಿ ಹದಗೆಡಲು ಪ್ರಾರಂಭಿಸಿತು.
ಹೀಗಾಗಿ ಆ ಹುಡುಗಿಯ ತಾಯಿ ಅವಳ ತುರಿಕೆ ಕಡಿಮೆ ಮಾಡಲು ಆಂಟಿ ಬ್ಯಾಕ್ಟೀರಿಯಲ್ ಸೊಳ್ಳೆ ಕಡಿತದ ಕ್ರೀಮ್ ಹಚ್ಚಿದ್ದಾರೆ. ಆದರೆ ಇದರ ಹೊರತಾಗಿಯೂ, ಕೆಲವು ದಿನಗಳಲ್ಲಿ ಆಕೆಯ ಸ್ಥಿತಿ ಹದಗೆಟ್ಟಿತು. ಸುಮಾರು ನಾಲ್ಕನೇ ದಿನದ ಹೊತ್ತಿಗೆ ಗಾಯದ ಗುರುತು ಹೆಚ್ಚಾಗಿ, ಗಟ್ಟಿಯಾಗಿ, ಸಂಪೂರ್ಣವಾಗಿ ಕೆಂಪು ಬಣ್ಣಕ್ಕೆ ತಿರುಗಿದ್ದು ಆ ಜಾಗದ ನೋವು ಇನ್ನು ಹೆಚ್ಚಾಗಿತ್ತು ಎಂದು ಹುಡುಗಿಯ ತಾಯಿ ಬೆಕ್ ಹೇಳಿಕೊಂಡಿದ್ದಾಳೆ.
ರಾತ್ರೋರಾತ್ರಿ ಊತ ಮೂರು ಪಟ್ಟು ಹೆಚ್ಚಾಯಿತು ಮತ್ತು ಆಗ ಆಕೆಗೆ ನಡೆಯಲು ಕಷ್ಟವಾಯಿತು. ನಂತರ ವಿಷಯ ಗಂಭೀರವಾಗಿದೆ ಎಂದು ಕುಟುಂಬಕ್ಕೆ ಅನಿಸಿದಾಗ, ಅವರು ವೈದ್ಯರ ಬಳಿಗೆ ಹೋಗಲು ಬಯಸಿದ್ದರು, ಆದರೆ ಹತ್ತಿರದ ಎಲ್ಲಾ ವೈದ್ಯರನ್ನು ವಾರಗಳ ಮುಂಚಿತವಾಗಿ ಬುಕ್ ಮಾಡಲಾಗಿತ್ತು. ಏನು ಮಾಡಲಾಗದ ಪರಿಸ್ಥಿತಿಯಲ್ಲಿ ಅವರು ಆನ್‌ಲೈನ್ ನರ್ಸ್ಅನ್ನು ಸಂಪರ್ಕಿಸಿದರು. ನರ್ಸ್ ತಕ್ಷಣ ಹುಡುಗಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು.
ವೈದ್ಯರು ಹೇಳಿದ್ದೇನು?
ಆಸ್ಪತ್ರೆಯಲ್ಲಿ ವೈದ್ಯರು ಬಾಲಕಿಯ ಮೊಣಕಾಲಿನ ಹಿಂದೆ ಸೋಂಕಿತ ಭಾಗವನ್ನು ನೋಡಿದ ತಕ್ಷಣ ಶಾಕ್ ಆದರು ಏಕೆಂದರೆ ಆಕೆಗೆ ಸೋಂಕಾದ ಸ್ಥಳ ಮೊಣಕಾಲಿನ ಕೀಲುಗಳ ಬಳಿ. ಅಲ್ಲಿ ಸೋಂಕು ಹರಡುವ ಅಪಾಯ ಹೆಚ್ಚು. ಪರೀಕ್ಷೆಯ ನಂತರ, ಅವಾಗೆ ಸ್ಟ್ಯಾಫ್ ಸೋಂಕು ಇರುವುದು ಕಂಡುಬಂದಿದೆ. ಇದಕ್ಕಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಮೂರು ದಿನಗಳ ಕಾಲ ಚಿಕಿತ್ಸೆ ಮುಂದುವರಿಸಬೇಕಾಯಿತು.
ಔಷಧಿಗಳು ಮಾಡದಿದ್ದಾಗ ಏನಾಯಿತು?
ಮೊದಲಿಗೆ ಅವಾಗೆ ಆಂಟಿ ಬಯೋಟಿಕ್ಸ್ ಕೆಲಸ ಮಾಡಲಿಲ್ಲ, ನಂತರ ವೈದ್ಯರು ಅವಾಗೆ MRSA ಎಂಬ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ಪತ್ತೆ ಮಾಡಿದರು. ಇದು ಒಂದು ನಿರ್ದಿಷ್ಟ ರೀತಿಯ ಸ್ಟ್ಯಾಫ್ ಸೋಂಕಾಗಿದ್ದು, ಇದು ಆಂಟಿ ಬಯೋಟಿಕ್ಗಳಿಗೆ ಬಹಳ ನಿರೋಧಕವಾಗಿದೆ.
ಅವಾಳ ಗಾಯಗಳು ವಾಸಿಯಾದರೂ, ಎರಡು ಗಂಭೀರ ಸ್ಟ್ಯಾಫ್ ಸೋಂಕುಗಳ ದೈಹಿಕ ಮತ್ತು ಭಾವನಾತ್ಮಕ ಗಾಯಗಳು ಉಳಿದಿವೆ ಎಂದು ತಾಯಿ ಹೇಳಿದರು. ಅವಳು ಈಗ ತನ್ನ ದೇಹದ ಮೇಲೆ ಯಾವುದೇ ಹುಣ್ಣನ್ನು ಕೆರೆದುಕೊಳ್ಳಲು ಅಥವಾ ಮುಟ್ಟಲು ಹೆದರುತ್ತಾಳೆ, ಮತ್ತು ಅದು ತನ್ನ ದೇಹದಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದು ಅವಳು ಚಿಂತಿತಳಾಗಿದ್ದಾಳೆ ಎಂದು ಆಕೆಯ ತಾಯಿ ಹೇಳಿದ್ದಾರೆ. (ಏಜೆನ್ಸೀಸ್)