

ಮಂಗಳೂರು: ಕರೊನಾ ಮಹಾಮಾರಿ ದಾಂಗುಡಿ ಇಟ್ಟ ಮೇಲೆ ಅದರಷ್ಟೇ ಸುದ್ದಿಯಾಗಿದ್ದು, ಮೊಬೈಲ್, ಫೋನ್ಗಳಲ್ಲಿ ಬರುತ್ತಿದ್ದ ಕರೊನಾ ಕಾಲರ್ ಟ್ಯೂನ್.
ಯಾರಿಗಾದರೂ ಫೋನ್ ಮಾಡಿದರೆ, ಅವರ ಫೋನ್ ರಿಂಗಾಗಲು ಈ ಕಾಲರ್ ಟ್ಯೂನ್ ಮುಗಿಯವ ತನಕ ಕಾಯಲೇಬೇಕಿತ್ತು. ಪ್ರತಿಸಲ ಫೋನ್ ಮಾಡಿದಾಗಲೂ ಇದನ್ನು ಕೇಳಿಕೇಳಿ ಅನೇಕ ಜನ ಬೇಸತ್ತು ಹೋಗಿದ್ದೂ ಉಂಟು.
ಹಾಗೇ, ಕರೊನಾ ಕಾಲರ್ ಟ್ಯೂನ್ನಲ್ಲಿ ಕನ್ನಡದಲ್ಲಿ ಮೂಡಿಬರುತ್ತಿದ್ದ ಧ್ವನಿ ಯಾರದ್ದಿರಬಹುದು ಎಂಬ ಕುತೂಹಲವೂ ಅದೆಷ್ಟೋ ಜನರಲ್ಲಿ ಹುಟ್ಟಿರಬಹುದು. ಅದಕ್ಕೆ ಉತ್ತರ ಈಗ ಸಿಕ್ಕಿದೆ...
ಕಾಲರ್ ಟ್ಯೂನ್ಗೆ ಕನ್ನಡದ ಧ್ವನಿ ಕೊಟ್ಟಿದ್ದು ಮಂಗಳೂರಿನ ಬಹುಮುಖ ಪ್ರತಿಭೆ ಡಾರೆಲ್ ಜೆಸಿಕಾ ಫರ್ನಾಂಡೀಸ್ ಎಂಬುವರು. ಪ್ರಸ್ತುತ ದೆಹಲಿಯಲ್ಲಿ ಶಿಕ್ಷಕಿಯಾಗಿದ್ದಾರೆ. ಇವರು ಮಂಗಳೂರಿನ ಪಡೀಲ್ ನಿವಾಸಿಯಾಗಿರುವ ದಿ ವೆಲೆರಿಯನ್ ಫರ್ನಾಂಡೀಸ್ ಮತ್ತು ಲವಿನಾ ಫರ್ನಾಂಡೀಸ್ ಅವರ ಪುತ್ರಿ.
ಜಗತ್ತಿಗೇ ಬಾಧಿಸಿದ ಕರೊನಾ ವೈರಸ್ ಬಗ್ಗೆ ಅರಿವು ಮೂಡಿಸುವಲ್ಲಿ ಕರಾವಳಿಯ ಯುವತಿಯ ಪಾತ್ರವೂ ಇದೆ ಎನ್ನುವುದು ವಿಶೇಷ.