

ಬೆಂಗಳೂರು: ಚಿನ್ನ ಕಳ್ಳಸಾಗಾಣೆಯ ಪ್ರಕರಣದಲ್ಲಿ ಮಾಣಿಕ್ಯ, ಪಟಾಕಿ ಖ್ಯಾತಿಯ ನಟಿ ರನ್ಯಾ ರಾವ್ (Ranya Rao) ಅವರನ್ನು ಸೋಮವಾರ (ಮಾರ್ಚ್ 3) ರಾತ್ರಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ (DRI) ಅಧಿಕಾರಿಗಳು ಬಂಧಿಸಿದ್ದು, ಕೋರ್ಟ್ ಅವರಿಗೆ 14 ದಿನಗಳ ನ್ಯಾಯಾಂಗ ಬಂಧವನ್ನು ವಿಧಿಸಿದೆ.
ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರನ್ಯಾ ರಾವ್ (Ranya Rao) ಅವರ ತಂದೆ, ಡಿಜಿಪಿ ರಾಮಚಂದ್ರ ರಾವ್ ಪ್ರತಿಕ್ರಿಯಿಸಿದ್ದು, ಆಕೆ ನಮ್ಮೊಂದಿಗೆ ವಾಸಿಸುತ್ತಿಲ್ಲ ಎಂದು ಹೇಳುವ ಮೂಲಕ ಪ್ರಕರಣದಿಂದ ಅಂತವನ್ನು ಕಾಯ್ದುಕೊಂಡಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ರಾಮಚಂದ್ರರಾವ್, ಮಾಧ್ಯಮಗಳ ಮೂಲಕ ಈ ವಿಚಾರ ನನ್ನ ಗಮನಕ್ಕೆ ಬಂದಾಗ ಒಂದು ಕ್ಷಣ ಆಘಾತಕ್ಕೆ ಒಳಗಾದೆ. ಮೂರು ತಿಂಗಳ ಹಿಂದಷ್ಟೇ ರನ್ಯಾ ಮದುವೆ ಮಾಡಿಕೊಂಡು ತಮ್ಮ ಪತಿಯೊಂದಿಗೆ ವಾಸಿಸುತ್ತಿದ್ದರು. ಈ ವಿಷಯದ ಬಗ್ಗೆ ನನಗೆ ತಿಳಿದಿರಲಿಲ್ಲ. ವಿಚಾರ ಕಿವಿಗೆ ಬಿದ್ದಾಗ ನಾನು ಆಘಾತಕ್ಕೊಳಗಾದೆ. ನನ್ನ ವೃತ್ತಿ ಬದುಕಿನಲ್ಲಿ ಒಂದು ಕಪ್ಪುಚುಕ್ಕೆ ಇಲ್ಲದಂತೆ ಸೇವೆ ಸಲ್ಲಿಸಿದ್ದೇನೆ. ಕಾನೂನು ಅದರ ಕೆಲಸ ಮಾಡುತ್ತದೆ. ಪ್ರಕರಣದ ಬಗ್ಗೆ ಹೆಚ್ಚಾಗಿ ನಾನು ಏನನ್ನೂ ಹೇಳಲು ಬಯಸುವುದಿಲ್ಲ ಎಂದು ನಟಿ ರನ್ಯಾ ರಾವ್ ಅವರ ತಂದೆ, ಡಿಜಿಪಿ ರಾಮಚಂದ್ರ ರಾವ್ ತಿಳಿಸಿದ್ದಾರೆ.
ದುಬೈನಿಂದ ಹೆಚ್ಚುವರಿ ಪ್ರಮಾಣದ ಚಿನ್ನ ಸಾಗಾಟ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಮಾಣಿಕ್ಯ ಸಿನಿಮಾ ಖ್ಯಾತಿಯ ನಟಿ ರನ್ಯಾ ರಾವ್ (Ranya Rao) ಅವರನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ನಿನ್ನೆ (ಮಾ.04) ವಶಕ್ಕೆ ಪಡೆದಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾ ರಾವ್ ಅವರನ್ನು ವಶಕ್ಕೆ ಪಡೆದಿರುವ ಡಿ.ಆರ್.ಐ ತಂಡ, ವಿಚಾರಣೆಗೆ ಒಳಪಡಿಸಿತ್ತು.
ಮೂಲತಃ ಚಿಕ್ಕಮಗಳೂರು ಜಿಲ್ಲೆಯವರಾದ ರನ್ಯಾ ಅವರು ಡಿಐಜಿ ರಾಮಚಂದ್ರ ರಾವ್ 2ನೇ ಪತ್ನಿ ಮೊದಲ ಗಂಡನ ಮಗಳಾಗಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಡಿ ಆರ್ ಐ ತಂಡ ವಿಮಾನ ನಿಲ್ದಾಣಕ್ಕೆ ಬಂದಿತ್ತು. ನಟಿ ರನ್ಯಾ ಏರ್ಪೋರ್ಟಿಗೆ ಬರುತ್ತಿದ್ದಂತೆ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಂದಹಾಗೆ ರನ್ಯಾ ರಾವ್ ಅವರು ನಟ ಸುದೀಪ್ ಅಭಿನಯದ ಮಾಣಿಕ್ಯ ಹಾಗೂ ಗಣೇಶ್ ನಟನೆಯ ಪಟಾಕಿ ಸಿನಿಮಾದಲ್ಲಿ ನಟಿಸಿದ್ದಾರೆ.