MBA Student Death: ಆಗಷ್ಟೇ ಜಾಬ್ ಆಫರ್ ಬಂದಿತ್ತು... ಆದರೆ MBA ವಿದ್ಯಾರ್ಥಿನಿ ಕಾಲೇಜು ಕಟ್ಟಡದಿಂದ ಜಿಗಿದು ಪ್ರಾಣ ಬಿಟ್ಟದ್ದು ಯಾಕೆ?

Jaipur Poornima University MBA Student Death
ಜೈಪುರ ಯೂನಿವರ್ಸಿಟಿಯಲ್ಲಿ ಸಿಸಿಟಿವಿಯಲ್ಲಿ ಸೆರೆಯಾದ ಭೀಕರ ದೃಶ್ಯ
Published on: 
Summary

ಜೈಪುರದ ಪೂರ್ಣಿಮಾ ವಿಶ್ವವಿದ್ಯಾಲಯದಲ್ಲಿ ದುರಂತ

6ನೇ ಮಹಡಿಯಿಂದ ಬಿದ್ದು 23 ವರ್ಷದ ಎಂ‍ಬಿಎ ವಿದ್ಯಾರ್ಥಿನಿ ಸಾವು

ಕ್ಯಾಂಪಸ್ ಸೆಲೆಕ್ಷನ್​ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ ವಿದ್ಯಾರ್ಥಿನಿ

Poornima University Jaipur: ಜೈಪುರದ ಪೂರ್ಣಿಮಾ ಯೂನಿವರ್ಸಿಟಿಯಲ್ಲಿ ದುರಂತವೊಂದು ನಡೆದಿದೆ. ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ಕೆಲಸ ಸಿಕ್ಕ ಖುಷಿಯಲ್ಲಿದ್ದ 23 ವರ್ಷದ ಎಂ‍ಬಿಎ (MBA) ವಿದ್ಯಾರ್ಥಿನಿ, ಕಾಲೇಜು ಕಟ್ಟಡದ 6ನೇ ಮಹಡಿಯಿಂದ ಬಿದ್ದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

ಜೈಪುರದ ಪ್ರೇಮ್ ನಗರದ ನಿವಾಸಿಯಾಗಿದ್ದ ಯಶಸ್ವಿ, ಪೂರ್ಣಿಮಾ ವಿಶ್ವವಿದ್ಯಾಲಯದಲ್ಲಿ ದ್ವಿತೀಯ ವರ್ಷದ ಎಂ‍ಬಿಎ ಓದುತ್ತಿದ್ದರು. ಎಲ್ಲವೂ ಚೆನ್ನಾಗಿದ್ದರೂ ನಿನ್ನೆ ಆಕೆ ದಿಡೀರನೆ ಸಾಯುವ ನಿರ್ಧಾರ ಕೈಗೊಂಡಿದ್ದು ಏಕೆ ಎಂಬುದು ಸದ್ಯ ನಿಗೂಢವಾಗಿದೆ.

ಸ್ನೇಹಿತರೊಂದಿಗೆ ನಗುತ್ತಾ ಮಾತನಾಡಿದ್ದ ವಿದ್ಯಾರ್ಥಿನಿ

ಶನಿವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಈ ದಾರುಣ ಘಟನೆ ಸಂಭವಿಸಿದೆ. ಅಂದು ವಿಶ್ವವಿದ್ಯಾಲಯದಲ್ಲಿ ಎಂ‍ಬಿಎ ಮಿಡ್ ಸೆಮೆಸ್ಟರ್ ಪರೀಕ್ಷೆ ಇತ್ತು. ಆದರೆ ಯಶಸ್ವಿ ಪರೀಕ್ಷೆಗೆ ಹೋಗಿರಲಿಲ್ಲ. ಘಟನೆಗೂ ಕೆಲವೇ ನಿಮಿಷಗಳ ಮೊದಲು ತರಗತಿಯ ಹೊರಗೆ ಸ್ನೇಹಿತರೊಂದಿಗೆ ಖುಷಿಯಿಂದ ನಗುನಗುತ್ತಲೇ ಮಾತನಾಡಿದ್ದ ಆಕೆ, ಬಳಿಕ ನೇರವಾಗಿ 6ನೇ ಮಹಡಿಯತ್ತ ತೆರಳಿದ್ದರು.

ಕಣ್ಣೆದುರೇ ನಡೆದ ದುರಂತ

ಯಶಸ್ವಿ 6ನೇ ಮಹಡಿಗೆ ತೆರಳುವುದನ್ನು ಗಮನಿಸಿದ ಸಹಪಾಠಿಗಳು, ಆಕೆಯನ್ನು ತಡೆಯಲು ಕೂಡಲೇ ಮಹಡಿಯತ್ತ ಓಡಿದ್ದಾರೆ. ಆದರೆ, ಅವರು ಅಲ್ಲಿಗೆ ತಲುಪುವಷ್ಟರಲ್ಲೇ ಯಶಸ್ವಿ ಮೇಲಿಂದ ಕೆಳಗೆ ಬಿದ್ದಿದ್ದಾರೆ. ತಕ್ಷಣವೇ ಗಾಯಾಳು ವಿದ್ಯಾರ್ಥಿನಿಯನ್ನು ಸ್ಥಳೀಯ ಮಹಾತ್ಮಾ ಗಾಂಧಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ, ಅಷ್ಟರಲ್ಲಿ ಆಕೆಯ ಪ್ರಾಣಪಕ್ಷಿ ಹಾರಿಹೋಗಿತ್ತು.

ಇದನ್ನೂ ಓದಿ: ಪ್ರೀತಿ ನಿರಾಕರಿಸಿದ್ದಕ್ಕೆ ಕೋಪ: ಕ್ಲಾಸ್‌ರೂಮ್‌ನಲ್ಲೇ ವಿದ್ಯಾರ್ಥಿನಿ ಮೇಲೆ ಗರಗಸದಿಂದ ಅಟ್ಯಾಕ್! | Chainsaw attack

ಸಿಸಿಟಿವಿಯಲ್ಲಿ ಸೆರೆಯಾಯ್ತು ಕರಾಳ ದೃಶ್ಯ

ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಶಿವದಾಸ್‌ಪುರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಕಾಲೇಜು ಸಿಬ್ಬಂದಿ ಹಾಗೂ ಸ್ನೇಹಿತರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದು, ದುರ್ಘಟನೆಯ ಬೆನ್ನಲ್ಲೇ ವಿಶ್ವವಿದ್ಯಾಲಯಕ್ಕೆ ತಾತ್ಕಾಲಿಕ ರಜೆ ಘೋಷಿಸಲಾಗಿದೆ.(ಏಜೆನ್ಸಿಸ್​)