Golf: ಕೋಲಾರ ಓಪನ್​ನಲ್ಲಿ ಶೌರ್ಯ ಭಟ್ಟಾಚಾರ್ಯ ಮುನ್ನಡೆ ವಿಸ್ತರಣೆ

Golf: ಕೋಲಾರ ಓಪನ್​ನಲ್ಲಿ ಶೌರ್ಯ ಭಟ್ಟಾಚಾರ್ಯ ಮುನ್ನಡೆ ವಿಸ್ತರಣೆ
Golf: ಕೋಲಾರ ಓಪನ್​ನಲ್ಲಿ ಶೌರ್ಯ ಭಟ್ಟಾಚಾರ್ಯ ಮುನ್ನಡೆ ವಿಸ್ತರಣೆ
Published on

ಪ್ರಮುಖ ಮುಖ್ಯಾಂಶಗಳು

  • ಮಧ್ಯಂತರ ಹಂತದಲ್ಲಿ ಮೂರು ಶಾಟ್​ಗಳ ಮುನ್ನಡೆ; 9-ಅಂಡರ್ 135 ಸ್ಕೋರ್

ಕೋಲಾರ: ದೆಹಲಿಯ 23 ವರ್ಷದ ಶೌರ್ಯ ಭಟ್ಟಾಚಾರ್ಯ ಅವರು ಎರಡನೇ ಸುತ್ತಿನಲ್ಲಿ 5-ಅಂಡರ್ 67 ಸ್ಕೋರ್ ದಾಖಲಿಸಿ, ₹1 ಕೋಟಿ ಬಹುಮಾನ ಮೊತ್ತದ ಕೋಲಾರ ಓಪನ್ ಪ್ರೆಸೆಂಟೆಡ್ ಬೈ ZION Hills Golf County ಟೂರ್ನಿಯಲ್ಲಿ ಮೂರು ಶಾಟ್​ಗಳ ಮುನ್ನಡೆ ಸಾಧಿಸಿದ್ದಾರೆ. ಎರಡು ಸುತ್ತುಗಳ ಬಳಿಕ ಶೌರ್ಯ 9-ಅಂಡರ್ 135 ಸ್ಕೋರ್​ನೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.

ಎರಡು ಬಾರಿ DP World PGTI ವಿಜೇತರಾಗಿರುವ ಶೌರ್ಯ ದಿನದ ಆರಂಭದಲ್ಲಿ ಒಂದು ಶಾಟ್ ಮುನ್ನಡೆಯಲ್ಲಿದ್ದರು. ಎರಡನೇ ಸುತ್ತಿನಲ್ಲಿ ಆರು ಬರ್ಡಿ ಮತ್ತು ಒಂದು ಬೋಗಿ ದಾಖಲಿಸಿದರು. 10ನೇ ಟೀಯಿಂದ ಆಟ ಆರಂಭಿಸಿದ ಅವರು 12ನೇ ಪಾರ್-4 ಹೋಲ್​ನಲ್ಲಿ ಬೋಗಿ ಮಾಡಿದ ಬಳಿಕವೂ ಉತ್ತಮ ಆಟದ ಮೇಲೆ ವಿಶ್ವಾಸ ಉಳಿಸಿಕೊಂಡರು.
17ನೇ ಹೋಲ್​ನಲ್ಲಿ ಉತ್ತಮ ಡ್ರೈವ್ ಮೂಲಕ ಬರ್ಡಿ ಮಾಡಿದ ನಂತರ ಶೌರ್ಯ 17ನೇ, 18ನೇ, 1ನೇ, 2ನೇ ಮತ್ತು 3ನೇ ಹೋಲ್​ಗಳಲ್ಲಿ ಸತತ ಐದು ಬರ್ಡಿಗಳನ್ನು ದಾಖಲಿಸಿ ಮುನ್ನಡೆ ಬಲಪಡಿಸಿದರು.
“ಆರಂಭ ನಿಧಾನವಾಗಿತ್ತು. ಆದರೆ ನಾನು ಉತ್ತಮ ಶಾಟ್​ಗಳನ್ನು ಆಡುತ್ತಿದ್ದೇನೆ ಎಂಬ ವಿಶ್ವಾಸವಿತ್ತು. 17ನೇ ಹೋಲ್​ನ ಉತ್ತಮ ಡ್ರೈವ್​ನಿಂದ ಆರಂಭವಾದ ಬರ್ಡಿ ಸರಣಿಯನ್ನು ಮುಂದುವರಿಸಲು ಸಾಧ್ಯವಾಯಿತು,” ಎಂದು ಶೌರ್ಯ ಹೇಳಿದರು.
ಹೈದರಾಬಾದ್ನ ಮೊಹಮ್ಮದ್ ಅಜರ್ 6-ಅಂಡರ್ 138ರೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಗ್ರೇಟರ್ ನೋಯ್ಡಾದ ಅರ್ಜುನ್ ಶರ್ಮಾ, ಚಂಡೀಗಢದ ಅಂಗದ್ ಚೀಮಾ ಮತ್ತು ಬಾಂಗ್ಲಾದೇಶದ ಬಾದಲ್ ಹೊಸೈನ್ ತಲಾ 3-ಅಂಡರ್ 141ರೊಂದಿಗೆ ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ.
DP World PGTI ರ್ಯಾಂಕಿಂಗ್​ನ ಅಗ್ರಸ್ಥಾನಿ ಸಪ್ತಕ್ ತಲ್ವಾರ್ 1-ಅಂಡರ್ 143ರೊಂದಿಗೆ ಟೈಡ್ 9ನೇ ಸ್ಥಾನದಲ್ಲಿದ್ದಾರೆ. ಕಳೆದ ವಾರ ತಮ್ಮ ಮೊದಲ ವೃತ್ತಿಪರ ಪ್ರಶಸ್ತಿ ಗೆದ್ದ ಶುಭಂ ಜಗ್ಲಾನ್ ಕೂಡ 143ರೊಂದಿಗೆ ಟೈಡ್ 9ನೇ ಸ್ಥಾನದಲ್ಲಿದ್ದಾರೆ.
ಡಿಫೆಂಡಿಂಗ್ ಚಾಂಪಿಯನ್ ಕ್ಷಿತಿಜ್ ನವೀದ್ ಕೌಲ್ 148ರೊಂದಿಗೆ ಟೈಡ್ 22ನೇ ಸ್ಥಾನದಲ್ಲಿದ್ದಾರೆ. 132 ಆಟಗಾರರ ಪೈಕಿ 51 ಮಂದಿ ಮಾತ್ರ ಕಟ್ನ್ನು ದಾಟಿ ಅಂತಿಮ ಎರಡು ಸುತ್ತುಗಳಿಗೆ ಅರ್ಹತೆ ಪಡೆದಿದ್ದಾರೆ.

ಕಳೆದ ವರ್ಷದ ರನ್ನರ್-ಅಪ್ ಶೌರ್ಯ, ಈ ಬಾರಿ ಪ್ರಶಸ್ತಿ ಗೆಲ್ಲುವ ಉತ್ತಮ ಸ್ಥಿತಿಯಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net