ಆಪರೇಷನ್ ಸಿಂಧೂರ ಬಗ್ಗೆ ಚರ್ಚಿಸುವಂತೆ ಕೇಳಿದ ಮನವಿ ತಿರಸ್ಕರಿಸಿದ ತರೂರ್| Shashi Tharoor

Shashi tharoor
Published on

Shashi Tharoor: ಸೋಮವಾರ ಸಂಸತ್​ನಲ್ಲಿ ಆಪರೇಷನ್ ಸಿಂಧೂರದ ಬಗ್ಗೆ ಚರ್ಚೆಯಲ್ಲಿ ಭಾಗವಹಿಸುವಂತೆ ಕಾಂಗ್ರೆಸ್ ಕೇಳಿಕೊಂಡ ಮನವಿಯನ್ನು ಸಂಸದ ಶಶಿ ತರೂರ್ ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ. ಬದಲಾಗಿ ಭಾರತೀಯ ಬಂದರು ಮಸೂದೆ-2025ರ ಬಗ್ಗೆ ಮಾತನಾಡವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

ಪಹಲ್ಗಾಮ್ ದಾಳಿಯ ನಂತರ ಕೇಂದ್ರ ಸರ್ಕಾರದ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಕಾಂಗ್ರೆಸ್ ಸಂಸದರಾದ ಶಶಿ ತರೂರ್ ಬಹಿರಂಗವಾಗಿ ಬೆಂಬಲಿಸಿ ಮಾತನಾಡಿದ್ದರು. ಜೊತೆಗೆ ವಿದೇಶಕ್ಕೆ ತೆರಳಿದ್ದ ನಿಯೋಗಗಳ ನೇತೃತ್ವವನ್ನು ವಹಿಸಿಕೊಂಡು ಕೇಂದ್ರ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡಿದ್ದರು. ಇದು ಕಾಂಗ್ರೆಸ್ ಪಕ್ಷ ನಾಯಕರ ಸಿಟ್ಟಿಗೆ ಕಾರಣವಾಗಿತ್ತು.

ಈಗ ಅದೇ ವಿಚಾರವಾಗಿ ಪಕ್ಷದ ಚೌಕಟ್ಟಿನೊಳಗೆ ಮಾತನಾಡಬೇಕಾದ ಸಂದರ್ಭ ಇರುವುದರಿಂದ ಈ ಬಗ್ಗೆ ಚರ್ಚೆಯಲ್ಲಿ ಭಾಗವಹಿಸಲ್ಲ ಮತ್ತು ಆ ಕುರಿತು ಮಾತನಾಡಲ್ಲ. ಬೇರೆ ಮಸೂದೆಗಳ ಕುರಿತು ಮಾತನಾಡುತ್ತೇನೆ ಎಂದು ಪಕ್ಷದ ನಾಯಕರಿಗೆ ಹೇಳಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.

ಪಿಟಿಐಗೆ ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಮಾತನಾಡಿ, "ಪ್ರಮುಖ ವಿಚಾರಗಳನ್ನ ಚರ್ಚಿಸುವಾಗ ಪಕ್ಷದ ನಾಯಕರನ್ನು ಮಾತನಾಡಲು ಆಸಕ್ತಿ ಇದೆಯೇ ಎಂದು ಕೇಳುವುದು ವಾಡಿಕೆ. ಅದೇ ರೀತಿ ಗೌರವ್ ಗೋಗಯ್ ಅವರು ತರೂರ್​​ ಅವರನ್ನು ಸಂಪರ್ಕಿಸಿದ್ದರು. ಆದರೆ ಆ ವಿಚಾರದ ಬಗ್ಗೆ ಮಾತನಾಡಲು ಆಸಕ್ತಿ ಇಲ್ಲ, ಬೇರೆ ಬಿಲ್ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಸಂಸತ್ ಬಳಿ ಈ ಕುರಿತು ಸುದ್ಧಿಗಾರರು ಕೇಳಿದ ಪ್ರಶ್ನೆಗೆ ಶಶಿ ತರೂರ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಸೋಮವಾರ ಮಧ್ಯಾಹ್ನದಿಂದ ಪಹಲ್ಗಾಮ್ ದಾಳಿ ಮತ್ತು ಆಪರೇಷನ್ ಸಿಂಧೂರ್ ಕುರಿತು ಬಿಸಿ ಬಿಸಿ ಚರ್ಚೆ ಆರಂಭವಾಗಿದೆ. ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿಯ ಕುರಿತು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಎನ್​​ಡಿಎ ಕೂಟ, ಇಂಡಿಯಾ ಮೈತ್ರಿ ಕೂಟದ ವಿಪಕ್ಷಗಳು ಚರ್ಚೆ ನಡೆಸುತ್ತಿವೆ.

ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ಉಗ್ರರ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದರು. ಪ್ರತಿಯಾಗಿ ಭಾರತ ಪಾಕ್ ವಿರುದ್ಧ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿತು. ಬಳಿಕ ಎರಡು ದೇಶಗಳು ಕದನ ವಿರಾಮ ಘೋಷಣೆ ಮಾಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದರು. ಇದಕ್ಕೆ ವಿಪಕ್ಷಗಳಾದಿಯಾಗಿ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿತ್ತು. ಆದರೆ ಕದನ ವಿರಾಮಕ್ಕೆ ಟ್ರಂಪ್ ಮಧ್ಯಸ್ಥಿಕೆ ವಹಿಸಿಲ್ಲ, ಪಾಕ್ ಕೇಳಿಕೊಂಡಿದ್ದಕ್ಕೆ ಕದನ ವಿರಾಮ ಘೋಷಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net