

ತಿರುವನಂತಪುರಂ: ಬಿಹಾರದ ಪ್ರಸಿದ್ಧ ಆಚರಣೆಯಾದ ಛತ್ ಪೂಜಾ ಹಬ್ಬದ ಶುಭಾಶಯಗಳನ್ನು ತಿಳಿಸುವ ಸಂದರ್ಭದಲ್ಲಿ ಸಂಸದ ಶಶಿ ತರೂರ್ (Shashi Tharoor) ಬಳಸಿರುವ ಪದವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.
ತಮ್ಮ ಎಕ್ಸ್ ಖಾತೆಯಲ್ಲಿ ಸಂಸದ ತರೂರ್, ಬಿಹಾರ ಮೂಲದ ಚಾಲಕನ ಕುಟುಂಬದೊಂದಿಗೆ ಛತ್ ಪೂಜೆ ಆಚರಿಸಿರುವ ಚಿತ್ರಗಳನ್ನು ಹಂಚಿಕೊಂಡಿದ್ದು, ಅದರಲ್ಲಿನ "ಬಿಹಾರಿ ಚಾಲಕ" ಎಂಬ ಪದದ ಆಯ್ಕೆಯು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.
ಎಲ್ಲರಿಗೂ ಛತ್ತ್ ಪೂಜೆಯ ಶುಭಾಶಯಗಳು! ನನ್ನ ಬಿಹಾರಿ ಚಾಲಕನ ಕುಟುಂಬವು ನನ್ನ ಬೆಳಗಿನ ಚಹಾ ಸಮಯದಲ್ಲಿ ಪ್ರಸಾದ ಮತ್ತು ಆಶೀರ್ವಾದಗಳನ್ನು ತಂದಿತು ಎಂದು ಬರೆದುಕೊಂಡಿದ್ದಾರೆ. ಒಂದು ಚಿತ್ರದಲ್ಲಿ ಚಾಲಕನ ಪತ್ನಿ ಶಶಿ ತರೂರ್ ಹಣೆಗೆ ತಿಲಕ ಇಡುತಿದ್ದರೆ, ಇನ್ನೊಂದು ಚಿತ್ರದಲ್ಲಿ ಮಹಿಳೆ ಮತ್ತು ಅವರ ಮಗಳು ಅವರೊಂದಿಗೆ ಪೋಟೋಗೆ ಪೋಸ್ ನೀಡುತ್ತಿರುವುದು ಕಂಡು ಬರುತ್ತಿದೆ.
ಅನೇಕರು ಈ ಪ್ರಕ್ರಿಯೆಯನ್ನು ಮೆಚ್ಚಿಕೊಂಡರೆ, ಇನ್ನೂ ಕೆಲವರು "ನನ್ನ ಬಿಹಾರಿ ಚಾಲಕ" ಎಂಬ ಪದ ಬಳಕೆಯಿಂದ ಬೇಸರಗೊಂಡಿದ್ದು, ಶುಭಾಶಯವನ್ನು ಇದಕ್ಕಿಂತ ಸೂಕ್ಷ್ಮವಾಗಿಯೂ ಹೇಳಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ನಿಮಗೆ ಇಂಗ್ಲಿಷ್ ಭಾಷೆಯ ಮೇಲೆ ಹಿಡಿತವಿದ್ದರೆ, 'ನನ್ನ ಚಾಲಕ ಬಿಹಾರದವರು' ಎಂದು ಹೇಳಬೇಕಿತ್ತು, ನಿಮ್ಮ ವ್ಯಕ್ತಿತ್ವಕ್ಕೆ ಅದೇ ಸೂಕ್ತವಾಗುತಿತ್ತು ಎಂದಿದ್ದಾರೆ.
ಹಲವಾರು ಜನ ತರೂರ್ ಅವರನ್ನು ಸಮರ್ಥಿಸಿಕೊಂಡಿದ್ದು, ಈ ರೀತಿಯ ಆಕ್ರೋಶವು ತಪ್ಪು, ಯಾರಾದರೂ ಬಿಹಾರಿ ಚಾಲಕ ಎಂದು ಹೇಳಿದರೆ ಅದರಲ್ಲೇನು ತಪ್ಪು.?, ಇದು ಅವಮಾನವಲ್ಲ, ಹೆಮ್ಮೆ. ಆ ರಾಜ್ಯದ ಜನರು ದೇಶ್ಯಾದ್ಯಂತ ಗೌರವದಿಂದ ಕಾರ್ಯನಿರ್ವಹಿಸುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಶಶಿ ತರೂರ್ ಪ್ರಸ್ತುತ ಕೇರಳದ ತಿರುವನಂತಪುರಂನಿಂದ ಕಾಂಗ್ರೆಸ್ ಪಕ್ಷದ ಸಂಸತ್ ಸದಸ್ಯರಾಗಿ ಕಾರ್ಯನಿರ್ವಹಸುತ್ತಿದ್ದಾರೆ.(ಏಜೆನ್ಸೀಸ್)