Sharvari gold lehenga: ಒಂದು ಕಾಲದಲ್ಲಿ ಮದುವೆ ಅಂದರೆ ಕೆಂಪು ಬಣ್ಣದ ಲೆಹೆಂಗಾ ಅಥವಾ ಸೀರೆ ಎನ್ನಲಾಗುತ್ತಿತ್ತು. ಬಳಿಕ ಪಾಸ್ಟೆಲ್, ಐವರಿ, ಪಿಂಕ್, ಬ್ಲೂ ಸೇರಿದಂತೆ ಹಲವು ಬಣ್ಣಗಳು ಬ್ರೈಡಲ್ ಫ್ಯಾಷನ್‌ನಲ್ಲಿ ಟ್ರೆಂಡ್ ಆದವು. ಇದೀಗ ಮತ್ತೆ ಗೋಲ್ಡ್ ಬಣ್ಣದತ್ತ ವಧುವಿನ ಫ್ಯಾಷನ್ ತಿರುಗುತ್ತಿದೆಯಾ ಎಂಬ ಕುತೂಹಲ ಮೂಡಿದೆ.
ಇದಕ್ಕೆ ಕಾರಣ ನಟಿ ಶಾರ್ವರಿ ಅವರ ಹೊಸ ಬ್ರೈಡಲ್ ಲುಕ್. ಅವರ ಮುಂಬರುವ ಸಿನಿಮಾ ‘ಯೇ ಪ್ರೇಮ್ ಮೋಲ್ ಲಿಯಾ’ ಚಿತ್ರದ ಟೈಟಲ್ ಟ್ರ್ಯಾಕ್‌ನಲ್ಲಿ ಆಯುಷ್ಮಾನ್ ಖುರಾನಾ ಜೊತೆಗಿನ ಮದುವೆ ಸನ್ನಿವೇಶದಲ್ಲಿ ಶಾರ್ವರಿ ಭರ್ಜರಿ ಗೋಲ್ಡನ್ ಲೆಹೆಂಗಾದಲ್ಲಿ ಕಾಣಿಸಿಕೊಂಡಿದ್ದಾರೆ.
ಡಿಸೈನರ್ ಗಝಲ್ ಗುಪ್ತಾ ವಿನ್ಯಾಸಗೊಳಿಸಿರುವ ಈ ಲೆಹೆಂಗಾದಲ್ಲಿ ಪೈಸ್ಲಿ, ಹೂವಿನ ವಿನ್ಯಾಸ ಮತ್ತು ಭರ್ಜರಿ ಎಂಬ್ರಾಯ್ಡರಿ ಇದೆ. ಅದಕ್ಕೆ ಹೊಂದುವ ಗೋಲ್ಡ್ ಟೋನ್ ಚೋಲಿ ಮತ್ತು ಶೀರ್ ಗೋಲ್ಡನ್ ದುಪಟ್ಟಾ ಲುಕ್‌ಗೆ ಇನ್ನಷ್ಟು ಗ್ರ್ಯಾಂಡ್ ಟಚ್ ನೀಡಿವೆ.
ಸ್ಟೇಟ್‌ಮೆಂಟ್ ಚೋಕರ್, ಕಿವಿಯೋಲೆ, ಬಳೆಗಳು, ಕಮರ್‌ಬಂಧ್, ಮಾಂಗ್ ಟಿಕ್ಕಾ ಹಾಗೂ ಮೂಗುತಿ ಸೇರಿದಂತೆ ಸಾಂಪ್ರದಾಯಿಕ ಆಭರಣಗಳು ಶಾರ್ವರಿ ಅವರ ವಧುವಿನ ಲುಕ್‌ನ್ನು ಮತ್ತಷ್ಟು ಗಮನ ಸೆಳೆಯುವಂತೆ ಮಾಡಿವೆ.
ಈ ಸಂಪೂರ್ಣ ಲುಕ್ 90ರ ದಶಕ ಮತ್ತು 2000ರ ಆರಂಭದ ಬಾಲಿವುಡ್ ಬ್ರೈಡಲ್ ಫ್ಯಾಷನ್‌ನ್ನು ನೆನಪಿಸುತ್ತದೆ. ವಿಶೇಷವಾಗಿ ‘ಹಮ್ ಸಾಥ್ ಸಾಥ್ ಹೈ’ ಸಿನಿಮಾದ ಸೋನಾಲಿ ಬೇಂದ್ರೆ ಅವರ ಗೋಲ್ಡನ್ ಬ್ರೈಡಲ್ ಲುಕ್ ಕೂಡ ನೆನಪಿಗೆ ಬರುತ್ತದೆ.
ಸಂಪೂರ್ಣ ಗೋಲ್ಡನ್ ಲೆಹೆಂಗಾ ಇಷ್ಟವಿಲ್ಲದವರು ಆಂಟಿಕ್ ಗೋಲ್ಡ್ ಎಂಬ್ರಾಯ್ಡರಿ, ಗೋಲ್ಡ್ ಬಾರ್ಡರ್ ಅಥವಾ ಸ್ಟೇಟ್‌ಮೆಂಟ್ ಬ್ಲೌಸ್ ಮೂಲಕ ಈ ಟ್ರೆಂಡ್ ಅನ್ನು ಅಳವಡಿಸಿಕೊಳ್ಳಬಹುದು. ಗೋಲ್ಡ್ ಸಿಲ್ಕ್ ಅಥವಾ ಟಿಶ್ಯೂ ಸೀರೆ ಕೂಡ ಕ್ಲಾಸಿಕ್ ಆಯ್ಕೆಯಾಗಬಹುದು.
ಸಂಗೀತ್ ಅಥವಾ ಕಾಕ್‌ಟೇಲ್ ಕಾರ್ಯಕ್ರಮಕ್ಕೆ ಲೈಟ್ ಗೋಲ್ಡ್ ಲೆಹೆಂಗಾ, ಸೀಕ್ವಿನ್ ಅಥವಾ ಮಿರರ್ ವರ್ಕ್ ಕೂಡ ಟ್ರೈ ಮಾಡಬಹುದು. ಶಾರ್ವರಿ ಅವರ ಈ ಲುಕ್, ಗೋಲ್ಡ್ ಬಣ್ಣವನ್ನು ಮತ್ತೆ ಬ್ರೈಡಲ್ ಫ್ಯಾಷನ್‌ನ ಪ್ರಮುಖ ಭಾಗವಾಗಿಸುವ ಸಾಧ್ಯತೆಯತ್ತ ಗಮನ ಸೆಳೆದಿದೆ. (ಏಜೆನ್ಸೀಸ್)