

ಸಾಗರ: ಜಿಲ್ಲೆಯ ಎರಡು ಲಕ್ಷಕ್ಕೂ ಅಧಿಕ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಸೆ.22ರಂದು ಸಾಗರ ಉಪವಿಭಾಗಾಧಿಕಾರಿ ಕಚೇರಿ ಎದುರು ಸಂತ್ರಸ್ತರು, ಅರಣ್ಯಭೂಮಿ ಸಾಗುವಳಿದಾರರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನ.ಶ್ರೀನಿವಾಸ್ ಹೇಳಿದರು.
ಮುಳುಗಡೆ ಸಂತ್ರಸ್ತರು, ಅರಣ್ಯಭೂಮಿ ಸಾಗುವಳಿದಾರರಿಗೆ ನೀಡುತ್ತಿರುವ ಒಕ್ಕಲೆಬ್ಬಿಸುವ ನೋಟಿಸ್ ಹಿಂಪಡೆಯಬೇಕು. ಲಿಂಗನಮಕ್ಕಿ ಅಣೆಕಟ್ಟು ನಿರ್ಮಿಸಲು 65 ವರ್ಷಗಳ ಹಿಂದೆ ಭೂಮಿ ತ್ಯಾಗ ಮಾಡಿದವರಿಗೆ ಈತನಕ ಬದಲಿ ಭೂ ಮಂಜೂರಾತಿ ಮಾಡಿಲ್ಲ. ಸಂತ್ರಸ್ತರ ಮೇಲೆ ಅರಣ್ಯ ಇಲಾಖೆ ಕೇಸ್ ಹಾಕುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯದರ್ಶಿಗಳು ಚರ್ಚೆ ಮಾಡಿ ಸಂತ್ರಸ್ತರಿಗೆ ನ್ಯಾಯ ದೊರಕಿಸಿ ಎಂದು ಸುಪ್ರೀಂ ಕೋರ್ಟ್ ಜ.20ರಂದು ಹೇಳಿದೆ. ಎಂಟು ತಿಂಗಳು ಕಳೆದರೂ ಆದೇಶ ಪಾಲನೆ ಮಾಡಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು
ರೈತರ ಅರ್ಜಿಗಳನ್ನು ವಜಾ ಮಾಡಬೇಡಿ. ರೈತರಲ್ಲು ಬಹುತೇಕ ಮಂದಿ ಅನಕ್ಷರಸ್ಥರು. ಭೂ ಮಂಜೂರಾತಿಗೆ ಬೇಕಾದ ದಾಖಲೆ ನೀವೇ ಹುಡುಕಿಕೊಡಿ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಆದರೆ ಉಪವಿಭಾಗಾಧಿಕಾರಿ ಆದೇಶ ಉಲ್ಲಂಘಿಸಿ ರೈತರ ಅರ್ಜಿ ವಜಾ ಮಾಡಿದ್ದಾರೆ ಎಂದರು.
ಮಲೆನಾಡು ರೈತರ ಸಮಸ್ಯೆಯನ್ನು ಈತನಕ ಸದನದಲ್ಲಿ ಶಾಸಕರು ಚರ್ಚೆ ಮಾಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ನ್ಯಾಯ ಕೊಡಿಸುವಲ್ಲಿ ವಿಫಲವಾಗಿದ್ದಾರೆ. ಮುಖ್ಯಮಂತ್ರಿಗಳು ಒಂದು ಬಾರಿಯೂ ರೈತರ ಸಭೆ ಕರೆದು ಸಮಸ್ಯೆ ಏನು ಎಂದು ಕೇಳಿಲ್ಲ. ಶರಾವತಿ ಮುಳುಗಡೆ ಸಂತ್ರಸ್ತರ ಬೇಡಿಕೆ ಈಡೇರಿಸಿಕೊಳ್ಳಲು ಹೋರಾಟ ಅನಿವಾರ್ಯವಾಗಿದೆ ಎಂದರು.
ಅಣೆಕಟ್ಟು ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ಸುಮಾರು 15 ಸಾವಿರ ಎಕರೆ ಖಾಲಿ ಇದೆ. ಅದನ್ನು ರೈತರಿಗೆ ವಾಪಸ್ ಮಾಡಲು ಆದೇಶವಾಗಿದ್ದರೂ ಈತನಕ ಸರ್ವೇ ಕಾರ್ಯ ನಡೆದಿಲ್ಲ. ಅಲ್ಲದೆ ಈಚೆಗೆ ಸುಪ್ರೀಂ ಕೋರ್ಟ್ ಪರಿಭಾವಿತ ಅರಣ್ಯ ಪ್ರದೇಶಗಳನ್ನು ಸರ್ವೇ ಮಾಡಿ ವರದಿ ನೀಡಲು ತಿಳಿಸಿದೆ. ಇಲ್ಲಿ ಸಾಗುವಳಿ ಭೂಮಿ, ಮನೆ, ಜಮೀನುಗಳಿವೆ. ಅರಣ್ಯ ಸ್ವರೂಪ ಇಲ್ಲದಿರುವ ಭೂಮಿಯನ್ನು ರೈತರಿಗೆ ಬಿಡಬೇಕು ಎಂದರು.
ದಿನೇಶ್, ಅಶೋಕ್, ಮಂಜುನಾಥ, ಕೃಷ್ಣಪ್ಪ, ನಾಗರಾಜ, ಮಂಜಪ್ಪ, ಪುಟ್ಟಸ್ವಾಮಿ, ಮೋಹನ್, ಎಚ್.ಬಿ.ರಾಜಪ್ಪ, ಸುಗಂಧರಾಜ, ಸುರೇಶ್, ರಾಘವೇಂದ್ರ, ಶೇಖರಪ್ಪ ಇತರರಿದ್ದರು.