23ಕ್ಕೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಶರಾವತಿ ಸಂತ್ರಸ್ತರ ಪ್ರತಿಭಟನೆ

ti.na.sreenivas
Published on

ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸುವಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳ ಬೇಜಾಬ್ದಾರಿತನ ಖಂಡಿಸಿ ಜೂ.23ರಂದು ಬೆಳಗ್ಗೆ 10ಕ್ಕೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನ.ಶ್ರೀನಿವಾಸ್ ಹೇಳಿದರು.

ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಂದ ಸುಪ್ರೀಂ ಕೋರ್ಟ್‌ನ ಆದೇಶ ಉಲ್ಲಂಘನೆಯಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಲೋಕಸಭಾ ಸದಸ್ಯರು ಮುಳುಗಡೆ ಸಂತ್ರಸ್ತರನ್ನು ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ 2022ರಂದು ಮಾಡಿರುವ ಬ್ಲಾಕ್‌ಗಳ ಅನುಸಾರ ಈಗ ಸರ್ವೇ ಮಾಡಲಾಗಿದೆ. ಆದರೆ ಬ್ಲಾಕ್‌ಗಳಲ್ಲಿ ಮೂಲ ಶರಾವತಿ ಸಂತ್ರಸ್ತರೇ ಬಿಟ್ಟು ಹೋಗಿದ್ದಾರೆ. 1960ರಲ್ಲೇ ಮಂಜೂರಾಗಿ ಸಾಗುವಳಿ ಮಾಡುತ್ತಿರುವ ರೈತರನ್ನು ಕೈಬಿಡಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

2017ರಲ್ಲಿ ಸಂತಸ್ತರ ಭೂಮಿಯನ್ನು ಜಂಟಿ ಸರ್ವೇ ಮಾಡಿ ಡಿನೋಟಿಫಿಕೇಶನ್ ಮಾಡಲಾಗಿತ್ತು. ಆದರೆ ಕೇಂದ್ರ ಸರ್ಕಾರದ ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ಇದರಿಂದ ಬಿಜೆಪಿ ಸರ್ಕಾರ ಎಲ್ಲ ಸರ್ಕಾರಿ ಆದೇಶವನ್ನು ರದ್ದುಪಡಿಸಿತ್ತು. ಪುನಃ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರ ಕಾರ್ಯದರ್ಶಿಗಳ ಮಟ್ಟದ ಅಧಿಕಾರಿಗಳು ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡು ವರದಿ ನೀಡುವಂತೆ ಕೋರ್ಟ್ ಆದೇಶಿಸಿದೆ. ಅದರಂತೆ ಸಂತ್ರಸ್ತರ ಸಾಗುವಳಿ ಭೂಮಿ ಜಂಟಿ ಸರ್ವೇ ಮಾಡಲಾಗುತ್ತಿದೆ ಎಂದು ಹೇಳಿದರು.

ಸಂತ್ರಸ್ತರಾದ ಕೆರೆಹಳ್ಳಿ ರಾಮಪ್ಪ, ಜಿ.ನಾರಾಯಣ ಗೌಡ, ಗೋವಿಂದಪ್ಪ, ಕೃಷ್ಣಪ್ಪ, ಷಣ್ಮುಖಪ್ಪ, ಕೆ.ಸಿ. ನಾಗರಾಜ್, ರಮೇಶ್, ರಾಜು ಶೆಟ್ಟಿ, ಪ್ರವೀಣ್, ಸುಧಾಕರ್, ಸುಧೀರ್, ಶೀನಿವಾಸ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net