

ಬೆಂಗಳೂರು: ಬಹೂಪಯೋಗಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಪಶ್ಚಿಮಘಟ್ಟ ಪರಿಸರಕ್ಕೆ ಹಾನಿ ಎಂದು ಅನಗತ್ಯವಾಗಿ ಅಪಸ್ವರ ಎತ್ತಲಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಬೇಸರ ವ್ಯಕ್ತಪಡಿಸಿದರು.
ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಸಂವಾದ ನಡೆಸಿದ ಅವರು, ಯೋಜನೆಯಡಿ 52 ಹೆಕ್ಟೇರ್ ಅರಣ್ಯ ಜಮೀನು ಸ್ವಾಧೀನಪಡಿಸಿಕೊಳ್ಳಲಾಗುತ್ತದೆ. ಅದೂ ಕೊಳವೆ ಮಾರ್ಗ ಹಾಕುವ ಅವಧಿಗೆ ಸೀಮಿತವಾಗಿರುತ್ತದೆ.
ನೀರು ಪಂಪ್ ಮಾಡುವುದಕ್ಕೆ ಕೊಳವೆಗಳನ್ನು ಹಾಕಿದ ನಂತರ ಮತ್ತೆ ಮುಚ್ಚಲಿದ್ದು, ಯಥಾರೀತಿ ಅರಣ್ಯ ಬೆಳೆಯಲಿದೆ. ಅಲ್ಲದೆ, 52 ಲಕ್ಷ ಹೆಕ್ಟೇರ್‌ಗೆ ಪರ್ಯಾಯವಾಗಿ ಕುದುರೆಮುಖ ಬಳಿ 120 ಹೆಕ್ಟೇರ್ ಕಂದಾಯ ಜಮೀನು ಗುರುತಿಸಿದ್ದು, ಸಸಿ ಬೆಳೆಸಿ ಅರಣ್ಯೀಕರಣ ಮಾಡಲಾಗುತ್ತದೆ ಎಂದರು.
ಯೋಜನೆಯಡಿ ಎರಡು ಸಾವಿರ ಮೆಗಾ ವಾಟ ವಿದ್ಯುತ್ ಅಧಿಕ ಬೇಡಿಕೆ ಅವಧಿಯಲ್ಲಿ ಕಡಿಮೆ ದರಕ್ಕೆ ಲಭ್ಯವಾಗಲಿದೆ. ಸಹಜ ಅರಣ್ಯ ಪ್ರದೇಶ ಲಭ್ಯವಾಗುವುದು ಆತಂಕವೂ ಅನಗತ್ಯವೆಂದು ಸಮರ್ಥಿಸಿಕೊಂಡರು.
ಯೋಜನೆಗೆ ಕೇಂದ್ರ ಪರಿಸರ ಇಲಾಖೆ ಪ್ರಾಥಮಿಕ ಒಪ್ಪಿಗೆ ಸಿಕ್ಕಿದೆ. ನಿಯಮದಂತೆ ಸಾರ್ವಜನಿಕರ ಅಹವಾಲು ಸ್ವೀಕಾರ ಸೇರಿ ಅಗತ್ಯ ಕ್ರಮವಹಿಸಲಿದ್ದು, ಪರಿಸರ ಇಲಾಖೆಗೆ ಮತ್ತೆ ಸಲ್ಲಿಸಿ ತೀರುವಳಿ ಪಡೆದ ನಂತರವಷ್ಟೇ ಅನುಷ್ಠಾನ ಕ್ರಮವಾಗಲಿದೆ ಎಂದು ಸ್ಪಷ್ಟಪಡಿಸಿದರು.
ಪಶ್ಚಿಮಘಟ್ಟದಲ್ಲಿ ಅನೇಕ ಹೆದ್ದಾರಿಗಳು ಹಾದು ಹೋಗಿವೆ. ಅಲ್ಲಿನ ಅರಣ್ಯ ಪ್ರದೇಶದೊಳಗೆ ವಾಹನ, ಟ್ರಕ್‌ಗಳು ಓಡಾಡುತ್ತವೆ. ಅವುಗಳಿಂದ ಉಂಟಾಗದ ಸಮಸ್ಯೆ, ಪಂಪ್ಡ್‌ಸ್ಟೋರೇಜ್‌ನಿಂದಾಗುತ್ತದೆ ಎನ್ನುವುದು ಅರ್ಥವಾಗುತ್ತಿಲ್ಲ.
ಈ ಹಿಂದೆ ಬೆಂಗಳೂರು ಸ್ಟೀಲ್ ಬ್ರಿಜ್‌ಗೆ 700 ಮರಗಳು ಹನನವಾಗುತ್ತವೆ ಎಂದು ಹುಯಿಲೆಬ್ಬಿಸಿ ಯೋಜನೆಗೆ ತಡೆವೊಡ್ಡಿದರು. ನಂತರ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಸಾವಿರಾರು ಮರಗಳ ಹನನವಾದರೂ ಯಾರೂ ಕೇಳಲಿಲ್ಲ ಎಂದು ಕೆ.ಜೆ.ಜಾರ್ಜ್ ಕನಲಿದರು.
ಕೇಂದ್ರದ ಯೋಜನೆಯ ನೆರವು ಪಡೆದು ತಾತ್ಕಾಲಿಕ, ಹೊಸ, ಹಳೆಯ ಸೇರಿ ಎಲ್ಲ ಗ್ರಾಹಕರಿಗೆ ಸ್ಮಾರ್ಟ್ ಮೀಟರ್ ಅಳವಡಿಸುವುದಕ್ಕೆ ಒಲವಿದೆ. ವಿದ್ಯುತ್ ಬಿಲ್, ಸಬ್ಸಿಡಿ ಬಾಕಿ ಮೊತ್ತ ಚುಕ್ತಾ ಮಾಡಿದರೆ ಕೇಂದ್ರ ಸರ್ಕಾರದ ವಿದ್ಯುತ್ ವಲಯ ಪುನಶ್ಚೇತನ (ಆರ್‌ಡಿಎಸ್‌ಎಸ್) ವಲಯದ ಪುನಶ್ಚೇತನ ಯೋಜನೆ ನೆರವು ಸಿಗುತ್ತದೆ.
ಸ್ಥಳೀಯ ಸಂಸ್ಥೆಗಳ ಬಾಕಿಯಿರುವ 12 ಸಾವಿರ ಕೋಟಿ ರೂ.ಗಳ ಸೆಸ್ ಮೂಲಕ ಸಂಗ್ರಹದ ಪರ್ಯಾಯ ದಾರಿಯನ್ನು ಕೇಂದ್ರ ಸಚಿವ ಮನೋಹರಲಾಲ್ ಖಟ್ಟರ್ ತೋರಿಸಿಕೊಟ್ಟಿದ್ದಾರೆ.
ಸಂಬಂಧಿಸಿದ ಪ್ರಸ್ತಾವನೆಗೆ ಸಚಿವ ಸಂಪುಟದ ಅನುಮೋದನೆ ದೊರೆತರೆ, ಆರ್‌ಡಿಎಸ್‌ಎಸ್‌ಗೆ ಸೇರಲು ಅವಕಾಶ ಸಿಗುತ್ತದೆ. ಯೋಜನೆ ಅವಧಿಯನ್ನು ಇನ್ನೆರಡು ವರ್ಷ ವಿಸ್ತರಣೆಗೂ ಕೇಂದ್ರ ಸಚಿವರು ತಾತ್ವಿಕ ಒಪ್ಪಿಗೆ ನೀಡಿದ್ದಾರೆ ಎಂದರು.
ಯೋಜನೆಯಡಿ ವಿದ್ಯುತ್ ಪ್ರಸರಣ ಮತ್ತು ವಿತರಣಾ ಜಾಲದ ಮೂಲಸವಲತ್ತು ಅಭಿವೃದ್ಧಿಗೆ ಶೇ.60ರಷ್ಟು ಅನುದಾನ, ಸ್ಮಾರ್ಟ್ ಮೀಟರ್‌ಗೆ ಸಬ್ಸಿಡಿಯೂ ಸಿಗುತ್ತದೆ ಎಂದು ಕೆ.ಜೆ.ಜಾರ್ಜ್ ತಿಳಿಸಿದರು.