

ಸಾಗರ: ಶರಾವತಿ ಹಿನ್ನೀರಿನ ಜನರ ಹಲವು ದಶಕಗಳ ಹೋರಾಟಕ್ಕೆ ತಾರ್ಕಿಕ ನ್ಯಾಯ ಕೊಡಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಸಂಸದ ಬಿ.ವೈ.ರಾಘವೇಂದ್ರ ಅವರ ಇಚ್ಛಾಶಕ್ತಿ ಮತ್ತು ಬದ್ಧತೆಯನ್ನು ಎಂದಿಗೂ ಮರೆಯುವುದಿಲ್ಲ ಎಂದು ಕಳಸವಳ್ಳಿ-ಅಂಬಾರಗೋಡ್ಲು ಸೇತುವೆ ಹೋರಾಟ ಸಮಿತಿ ಸಂಚಾಲಕ ಪ್ರಸನ್ನ ಕೆರೆಕೈ ಹೇಳಿದರು.
ಸಾಗರದ ಶ್ರೀ ರಾಘವೇಶ್ವರ ಭಾರತಿ ಭಾನುವಾರ ಸಭಾಭವನದಲ್ಲಿ ಸಾಗರದ ಹವ್ಯಕ ಸಂಸ್ಥೆ ಆಯೋಜಿಸಿದ್ದ ಕಳಸವಳ್ಳಿ- ಅಂಬಾರಗೋಡ್ಲು- ಹೊಳೆಬಾಗಿಲು ಸೇತುವೆಯ ಹೋರಾಟದ ಹೆಜ್ಜೆ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶರಾವತಿ ನದಿಗೆ ಮೊದಲ ಬಾರಿ ಹಿರೇಭಾಸ್ಕರ ಅಣೆಕಟ್ಟು ಕಟ್ಟಿದಾಗ ಮೈಸೂರು ಮಹಾರಾಜರೇ ಅಂದು ಮುಂದೆ ನಿಂತು ಪುನರ್ವಸತಿ ಕಲ್ಪಿಸಿಕೊಟ್ಟರು. ನಮಗೆ ಸಂಪರ್ಕದ ಸಮಸ್ಯೆ ಆಗ ಹೆಚ್ಚಾಗಿರಲಿಲ್ಲ. ನಂತರ ಹಿರೇಭಾಸ್ಕರ ಅಣೆಕಟ್ಟು ಮುಳುಗಿಸಿ ಲಿಂಗನಮಕ್ಕಿ ಅಣೆಕಟ್ಟು ಕಟ್ಟಿದಾಗ ನಮ್ಮ ಕರೂರು, ಬಾರಂಗಿ ಹೋಬಳಿಯ ಜನತೆ ನಿರಾಶ್ರಿತರಾದರು. ಸಂತ್ರಸ್ತರನ್ನು ಕಾಡಲ್ಲಿ ಬಿಟ್ಟರು. ಇಂದಿಗೂ ನಮ್ಮ ಭಾಗದ ಜನ ಸಂತ್ರಸ್ತರಾಗಿಯೇ ಉಳಿದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸಿಗಂದೂರು ಸೇತುವೆ ಆಗಿಯೇ ಹೋಯಿತು ಎನ್ನುವ ಸಂದರ್ಭದಲ್ಲಿ ರಾಜಕೀಯ ಕಾರಣಕ್ಕೆ ಅನುದಾನ ವಾಪಸ್ ಹೋಯಿತು. ಐಎಎಸ್ ಅಧಿಕಾರಿಗಳು ನಕಾರಾತ್ಮಕ ವರದಿ ನೀಡಿದರು. ಇವೆಲ್ಲದರ ಮಧ್ಯೆ ಯಡಿಯೂರಪ್ಪ ಅವರ ಗಟ್ಟಿತನ, ರಾಘವೇಂದ್ರ ಅವರ ಇಚ್ಛಾಶಕ್ತಿಯಿಂದ ಸೇತುವೆ ಕನಸು ನನಸಾಯಿತು. ನೆರವಿಗೆ ನಿಂತ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಮತ್ತು ನಿತಿನ್ ಗಡ್ಕರಿ ಅವರ ನೆರವು ಸ್ಮರಣೀಯ ಎಂದರು.
ರಾಜ್ಯದ ಜನತೆಗೆ ವಿದ್ಯುತ್ ನೀಡುವಲ್ಲಿ ನಮ್ಮ ಭಾಗವನ್ನು ಅಂದು ಮುಳುಗಿಸಲಾಯಿತು. ಶಿಕ್ಷಣ, ಆರೋಗ್ಯ ಎಲ್ಲದರಿಂದಲೂ ವಂಚಿತರಾದೆವು. ಕಂಬಳಿಯಲ್ಲಿ ತಾಯಂದಿರು, ಮಕ್ಕಳನ್ನು ಜೋಲಿಯಲ್ಲಿ ತರುವ ಪರಿಸ್ಥಿತಿ ಬಂತು. ಈಗ ಸೇತುವೆ ಆಗಿದೆ ಎನ್ನುವ ಸಂತೃಪ್ತಿ ಇದ್ದರೂ ಅಂದು ಪಟ್ಟ ಪಾಡು ಬಹುದೊಡ್ಡದು. ಕೆಪಿಸಿ ವಿದ್ಯುತ್ ಉತ್ಪಾದನೆಯಿಂದ ಕೋಟ್ಯಂತರ ಆದಾಯ ಗಳಿಸಿದೆ. ಅಭಿವೃದ್ಧಿಯ ವಿಚಾರ ಬಂದಾಗ ಕತೆ ಕಟ್ಟಿ ಹೇಳುತ್ತಾರೆ ಅಸಮಾಧಾನ ವ್ಯಕ್ತಪಡಿಸಿದರು.
ವಿಜಯವಾಣಿ ವರದಿ ಪ್ರಸ್ತಾಪ: ಸೇತುವೆಗೆ ಹೋರಾಟ ನಡೆಯುತ್ತಿದ್ದ ಸಂದರ್ಭ ವಿಜಯವಾಣಿ ಪತ್ರಿಕೆ ಬೆನ್ನೆಲುಬಾಗಿ ನಿಂತು ಸರಣಿ ಲೇಖನಗಳನ್ನು ಮಾಡಿತು. ನಮ್ಮ ಹೋರಾಟಕ್ಕೆ ಇನ್ನಷ್ಟು ಪ್ರಾಮುಖ್ಯ ಬರುವಂತೆ ಮಾಡಿದ ಉಪಕಾರ ದೊಡ್ಡದು ಎಂದು ಸ್ಮರಿಸಿದರು.
ಹವ್ಯಕ ಸಾಗರ ಸಂಸ್ಥೆ ಅಧ್ಯಕ್ಷ ಎಚ್.ಜಿ.ರಾಮಚಂದ್ರ ರಾವ್ ಹಕ್ರೆ, ಹೂ.ಬಾ.ಅಶೋಕ್ ಇತರರಿದ್ದರು.