

ಸೊರಬ: ತಾಲೂಕಿನ ಮಾವಲಿ ಗ್ರಾಮದ ಉಮಾಮಹೇಶ್ವರ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಡಿ.14ರಂದು 5ನೇ ತಾಲೂಕು ಮಟ್ಟದ ಶರಣ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಮೃತ್ಯುಂಜಯ ಗೌಡ ಹೇಳಿದರು.
5ನೇ ತಾಲೂಕು ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ತಾಲೂಕಿನ ಗುಡುಗಿನಕೊಪ್ಪ ಗ್ರಾಮದ ಕಬ್ಬೂರು ಶರಣ ನಿಂಗಪ್ಪ ಅವರನ್ನು ಸಮ್ಮೇಳನಕ್ಕೆ ಮಂಗಳವಾರ ಆಹ್ವಾನಿಸಿ ಮಾತನಾಡಿದರು.
ಹಿರಿಯರ ಮಾರ್ಗದರ್ಶನದಲ್ಲಿ ಶರಣ ಪರಂಪರೆ ಮುಂದುವರಿಸಿಕೊಂಡು ಬರುತ್ತಿದ್ದೇವೆ. ದಾರ್ಶನಿಕರ ವಿಚಾರಧಾರೆಗಳನ್ನು ಯುವಜನರಿಗೆ ಪರಿಚಯಿಸುವ ಉದ್ದೇಶದಿಂದ ಪ್ರತಿ ವರ್ಷ ಶರಣ ಸಾಹಿತ್ಯ ಸಮ್ಮೇಳನ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಜಡೆ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮೀಜಿ ಮಾತನಾಡಿ, 12ನೇ ಶತಮಾನದಲ್ಲಿ ವಚನಕಾರರು ಪ್ರತಿಪಾದಿಸಿದ ನಿಲುವುಗಳು ಸರ್ವಕಾಲಕ್ಕೂ ಪ್ರಸ್ತುತ. ಅಂತಹ ಮಹನೀಯರ ಚಿಂತನೆಗಳಿಂದ ಪ್ರಭಾವಿತರಾದ ಶರಣ ನಿಂಗಪ್ಪ ಅವರನ್ನು ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಉತ್ತಮ ಎಂದರು.
ಯೋಗ ಸಾಧನೆ ಮೂಲಕ ಶರಣ ಪರಂಪರೆಯನ್ನು ಸಮಾಜಕ್ಕೆ ತಿಳಿಸಿಕೊಡಲು ಪ್ರಯತ್ನಿಸುತ್ತಿರುವ ಶರಣರ ಈ ನಡೆ ಅನುಕರಣೀಯ. ಸಾಹಿತ್ಯ ಹಾಗೂ ಕಮ್ಮಟಗಳಲ್ಲಿ ಚಿಂತನ-ಮಂಥನ ನಡೆದಾಗ ಜನರಲ್ಲಿ ಪರಿವರ್ತನೆ ಭಾವನೆ ಮೂಡಿ ಧಾರ್ಮಿಕ ಹಾಗೂ ಆಧ್ಯಾತ್ಮಿಕವಾಗಿ ತೊಡಗಿಕೊಳ್ಳಬಹುದು ಎಂದು ತಿಳಿಸಿದರು.
ತಾಲೂಕು ಶರಣ ಸಾಹಿತ್ಯ ಪರಿಷತ್ ಸ್ಥಾಪಕ ಅಧ್ಯಕ್ಷ ವಿರೂಪಾಕ್ಷಪ್ಪ, ಮಹಾಂತೇಶ್, ವಿಜಯೇಂದ್ರ ಗೌಡ, ರಾಜು ಹಿರಿಯಾವಲಿ, ಮಲ್ಲಸಜ್ಜನ ಗೌಡ, ಸಿದ್ದಪ್ಪ, ಶಿವಪ್ರಸಾದ್ ಇದ್ದರು.