ಶನೈಶ್ಚರಸ್ವಾಮಿ ಅದ್ದೂರಿ ಉತ್ಸವ

IMG-20250308-WA0017
Published on

ಪಟ್ಟಣದ ನಾಯಕರ ಬೀದಿಯ ದೇಗುಲದಲ್ಲಿ ಪೂಜೆ

ಎಚ್.ಡಿ.ಕೋಟೆ : ಪಟ್ಟಣದ ನಾಯಕರ ಬೀದಿಯಲ್ಲಿರುವ ಶ್ರೀರಾಮಂದಿರ ರಸ್ತೆಯಲ್ಲಿ ಶನಿವಾರ ಶ್ರೀ ಶನೈಶ್ಚರ ಸ್ವಾಮಿ ರಥೋತ್ಸವ ಹಾಗೂ ಪೂಜಾ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ಉತ್ಸವದ ಅಂಗವಾಗಿ ದೇಗುಲವನ್ನು ತಳಿರು-ತೊರಣಗಳಿಂದ ಅಲಂಕಾರ ಮಾಡಲಾಗಿತ್ತು. ದೇಗುಲದಲ್ಲಿ ಮುಂಜಾನೆಯಿಂದಲೇ ಪೂಜಾ ಕೈಂಕರ್ಯಗಳು ನೆರವೇರಿದವು. ದೇಗುಲದ ಮುಖ್ಯ ಅರ್ಚಕ ಶ್ರೀಧರಮೂರ್ತಿ ನೇತೃತ್ವದಲ್ಲಿ ಬೆಳಗ್ಗೆ ಅಭಿಷೇಕ, ಪುಣ್ಯಾಹ, ಗಣಪತಿ ಹೋಮ, ನವಗ್ರಹ ಹೋಮ, ದೇವರಿಗೆ ಅಭಿಷೇಕ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ನಡೆದವು. ಮಧ್ಯಾಹ್ನ ದೇವಸ್ಥಾನಕ್ಕೆ ಬಂದಿದ್ದ ಭಕ್ತರಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.

ತಾಲೂಕಿನ ಸುತ್ತಮುತ್ತಲಹಳ್ಳಿಗಳಾದ ಹ್ಯಾಂಡ್‌ಪೋಸ್ಟ್, ಎಚ್.ಮಟಕೆರೆ, ಹೈರಿಗೆ, ಮೇಟಿಕುಪ್ಪೆ, ಹೆಬ್ಬಳ್ಳ, ಹೆಗ್ಗಡಾಪುರ, ಪಟ್ಟಣದ ವಿವಿಧ ಬಡಾವಣೆಗಳಿಂದ ಆಗಮಿಸಿದ ನೂರಾರು ಭಕ್ತರು ಸ್ವಾಮಿ ದರ್ಶನ ಪಡೆದು ಕೃತಾರ್ಥರಾದರು. ಇದೇ ಸಂದರ್ಭದಲ್ಲಿ ಬೀರಪ್ಪಸ್ವಾಮಿ, ಮಲೆ ಮಹದೇಶ್ವರಸ್ವಾಮಿ ಸೇರಿದಂತೆ ಇತರ ದೇವರ ಗುಡ್ಡಪ್ಪಗಳ ನೃತ್ಯವನ್ನು ಭಕ್ತರು ಕಣ್ತುಂಬಿಕೊಂಡರು.

ರಥೋತ್ಸವ: ಸ್ವಾಮಿ ಪೂಜೆ ಅಂಗವಾಗಿ ರಾತ್ರಿ ಶ್ರೀ ಶನೈಶ್ಚರ ಸ್ವಾಮಿಯ ರಥೋತ್ಸವ ಬಡಾವಣೆಯ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ನಡೆಯಿತು. ದೇಗುಲದಿಂದ ಹೊರಟ ಮೆರವಣಿಗೆ ರಾಮಮಂದಿರ ರಸ್ತೆ ಮೂಲಕ ಹನುಮಂತನಗರ, ಒಂದನೇ ಮುಖ್ಯ ರಸ್ತೆ, ಎರಡನೇ ಮುಖ್ಯ ರಸ್ತೆಯಲ್ಲಿ ಸಾಗಿ ಕಾಳಿದಾಸ ರಸ್ತೆ ಮೂಲಕ ಮತ್ತೆ ದೇವಸ್ಥಾನದಲ್ಲಿ ಬಂದು ಅಂತ್ಯಗೊಂಡಿತು. ಗ್ರಾಮದ ಯಜಮಾನರು, ಮುಖಂಡರು, ಹರಕೆ ಹೊತ್ತ ಭಕ್ತರು ಸ್ವಾಮಿ ರಥ ಎಳೆದು ಭಕ್ತಿ ಸಮರ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net