ಕಪೂರ್ ಸರ್‌ನೇಮ್‌ನ ಕೆಲ ಬಾಲಿವುಡ್ ನಟಿಯರು ಈಗಾಗಲೇ ಟಾಲಿವುಡ್‌ನಲ್ಲಿ ಮೋಡಿ ಮಾಡಿದ್ದಾರೆ. ಶ್ರದ್ಧಾ ಕಪೂರ್ (‘ಸಾಹೋ’), ಜಾಹ್ನವಿ ಕಪೂರ್ (‘ದೇವರ’, ‘ಪೆದ್ದಿ’) ತೆಲುಗಿನಲ್ಲೂ ನಟಿಸಿ, ಸೈ ಎನಿಸಿಕೊಂಡಿದ್ದಾರೆ. ಇದೀಗ ಕಪೂರ್ ಕುಟುಂಬದ ಮತ್ತೊಬ್ಬ ನಟಿ ಟಾಲಿವುಡ್‌ಗೆ ಪರಿಚಯವಾಗುತ್ತಿದ್ದಾರೆ. ಅವರೇ ಶನಾಯಾ. ನಟ ಸಂಜಯ್ ಕಪೂರ್ ಪುತ್ರಿಯಾಗಿರುವ ಶನಯಾ ಹಿಂದಿಯ ‘ಆಂಖೋನ್ ಕಿ ಗುಸ್ತಾಖಿಯಾ’, ‘ತು ಯಾ ಮೇ’ ಸೇರಿ ಬೆರಳಣಿಕೆಯಷ್ಟು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿ, ತಮ್ಮದೇ ಛಾಪು ಮೂಡಿಸಿದ್ದಾರೆ. ಇದೀಗ ಅವರು ಟಾಲಿವುಡ್‌ಗೆ ಎಂಟ್ರಿ ಕೊಡಲು ಸಿದ್ಧತೆ ನಡೆಸುತ್ತಿದ್ದಾರೆ. ‘ಹನುಮಾನ್’, ‘ಮಿರಾಯ್’ ಬಳಿಕ ನಟ ತೇಜಾ ಸಜ್ಜಾ 2021ರಲ್ಲಿ ತೆರೆಕಂಡಿದ್ದ ‘ಜಾಂಬಿ ರೆಡ್ಡಿ’ ಚಿತ್ರದ ಸೀಕ್ವೆಲ್‌ನಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಶನಾಯಾ ಕಪೂರ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಪಾತ್ರವು ಗಟ್ಟಿಯಾಗಿದ್ದು, ಅಷ್ಟೇ ಎನರ್ಜಿಟಿಕ್ ಆಗಿ ನಟಿಸುವ ನಾಯಕಿಯರ ಅವಶ್ಯಕತೆಯಿರುವ ಕಾರಣ ಚಿತ್ರತಂಡ ಶನಾಯಾ ಕಪೂರ್‌ರನ್ನು ಆಯ್ಕೆ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ. ಈಗಾಗಲೇ ನಟಿ ಕೆಲವು ದಿನಗಳ ಕಾಲ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ. ಇನ್ನು ಶನಾಯಾಗೆ ಇದೇ ದಕ್ಷಿಣ ಭಾರತದ ಮೊದಲ ಸಿನಿಮಾವಾಗಲಿದೆ. ಈ ಹಿಂದೆ ಮೋಹನ ಲಾಲ್ ನಟನೆಯ ‘ವೃಷಭ’ ಚಿತ್ರದಲ್ಲಿ ಅವರು ನಟಿಸಬೇಕಿತ್ತು. ಆದರೆ, ಡೇಟ್ ಸಮಸ್ಯೆಯಿಂದಾಗಿ ಚಿತ್ರದಿಂದ ಹೊರನಡೆದಿದ್ದರು. -ಏಜೆನ್ಸೀಸ್