ಶಂಬಾ ಜೋಶಿ ಬಹುಮುಖದ ಅನ್ವೇಷಕ: ಕೇಶವ ಶರ್ಮ

sahyadri
ಶಂಬಾ ಸಂಸ್ಕೃತಿ-ಸಂಶೋಧನೆ- ಮರು ಚಿಂತನೆ ವಿಷಯ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪದಲ್ಲಿ ಡಾ. ಕೇಶವ ಶರ್ಮ ಅವರನ್ನು ಸನ್ಮಾನಿಸಲಾಯಿತು. ಡಾ. ದತ್ತಾತ್ರೇಯ, ಡಾ. ಎಸ್.ಎಂ.ಮುತ್ತಯ್ಯ, ಡಾ. ಸೈಯದ್ ಸನಾವುಲ್ಲಾ ಇತರರಿದ್ದರು.
Published on

ಶಿವಮೊಗ್ಗ: ಬಹುತ್ವದ ಪ್ರತಿಪಾದಕರಾದ ಶಂಬಾ ಜೋಶಿ ಬಹುಮುಖದ ಅನ್ವೇಷಕರೂ ಆಗಿದ್ದರು ಎಂದು ಕುವೆಂಪು ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ. ಕೆ.ಕೇಶವ ಶರ್ಮ ಅಭಿಪ್ರಾಯಪಟ್ಟರು.

ಸಹ್ಯಾದ್ರಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಶಂಬಾ ಸಂಸ್ಕೃತಿ-ಸಂಶೋಧನೆ- ಮರು ಚಿಂತನೆ ವಿಷಯ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ಶಂಬಾ ಅವರ ಕೃತಿಗಳು ವಿಸ್ತಾರದ ಚೌಕಟ್ಟು ಹೊಂದಿವೆ. ಅವುಗಳನ್ನು ದಾಟುವ ಸಾಮರ್ಥ್ಯ ನಮಗಿಲ್ಲ ಎಂದರು.

ಶಂಬಾ ಅವರ ಋಗ್ವೇದ ರಹಸ್ಯ ಕೃತಿಯು ವೇದಗಳ ರಹಸ್ಯಗಳನ್ನೇ ಬಯಲು ಮಾಡಿದೆ. ವೇದಗಳು ದೇವರ ಗ್ರಂಥಗಳೆಂಬ ನಂಬಿಕೆಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಅದನ್ನು ದಾಟಿ ಬುದ್ಧಿಜೀವಿ ಎನಿಸಿಕೊಂಡವರನ್ನೂ ಬೆರಗುಗೊಳಿಸಿದರು ಎಂದು ತಿಳಿಸಿದರು.

ಋಗ್ವೇದದ ಪಾವಿತ್ರೃವನ್ನು ಹಾಳು ಮಾಡಿದರೆಂಬ ಆರೋಪವೂ ಅವರ ಮೇಲಿದೆ. ಋಗ್ವೇದವೂ ಸೇರಿ ವೇದಗಳಿಗೆ ವೈಜ್ಞಾನಿಕ ಬೆಳಕು ಕೊಟ್ಟವರು ಶಂಬಾ. ಕನ್ನಡ ನಾಡಿನ ದೈವಗಳ ಬಗ್ಗೆಯೂ ಅವರು ಅಧ್ಯಯನ ಮಾಡಿ ಹೊಸಬೆಳಕು ಚೆಲ್ಲಿದ್ದಾರೆ. ಆ ಮೂಲಕ ಮಾನವ ಧರ್ಮದ ಆರಾಧನೆಯೇ ಮುಖ್ಯ ಎಂದು ಪ್ರತಿಪಾದಿಸಿದ್ದಾರೆ. ಯುರೋಪಿಯನ್ ವಿದ್ವಾಂಸರಿಗೆ ತಮ್ಮ ಕೃತಿಗಳ ಮೂಲಕ ತಕ್ಕ ಉತ್ತರ ಕೊಟ್ಟ ಅವರು ಸಂಶೋಧನೆಯ ದಿಕ್ಕನ್ನೇ ಬದಲಿಸಿದವರು ಎಂದು ಹೇಳಿದರು.

ಕುವೆಂಪು ವಿವಿ ಪ್ರಾಧ್ಯಾಪಕ ಡಾ. ದತ್ತಾತ್ರೇಯ ಮಾತನಾಡಿ, ಶಂಬಾ ಆಧುನಿಕ ಜ್ಞಾನದ ವಕ್ತಾರ. ಪಾಶ್ಚಿಮಾತ್ಯ ಚೌಕಟ್ಟನ್ನು ಬಳಸಿಕೊಂಡೇ ವೇದಗಳ ಒಗಟು ಬಿಡಿಸಿದವರು. ಭಾರತದ ಬುಡಕಟ್ಟುಗಳ ಅಧ್ಯಯನ ಮಾಡಲು ಬಂದ ಯುರೋಪಿಯನ್ನರಿಗೆ ಇಲ್ಲಿನ ಪಂಡಿತರೇ ಗೈಡ್ ಆಗಿದ್ದರು. ಹಾಗಾಗಿ ಯುರೋಪಿಯನ್ನರ ವಿಮರ್ಶಕರ ನೆಲೆ ಹೇಗಿತ್ತು ಎಂದು ನಾವು ಯೋಚಿಸಬಹುದಾಗಿದೆ ಎಂದರು.

ವಿಚಾರ ಸಂಕಿರಣದ ಸಂಚಾಲಕ ಡಾ. ಕೆ.ಎನ್.ಮಂಜುನಾಥ್, ಪ್ರಾಚಾರ್ಯ ಡಾ. ಸೈಯದ್ ಸನಾವುಲ್ಲಾ, ಇತಿಹಾಸ ವಿಭಾಗದ ಮುಖ್ಯಸ್ಥ ಕೆ. ಶಫೀವುಲ್ಲಾ, ಡಾ. ಎಸ್.ಎಂ.ಮುತ್ತಯ್ಯ, ಡಾ. ಎಚ್.ಎಂ.ಶಂಭುಲಿಂಗಮೂರ್ತಿ, ವೈ.ಪಿ.ನಟರಾಜ್, ಡಾ. ಮೇಟಿ ಮಲ್ಲಿಕಾರ್ಜುನ, ಡಾ. ಪ್ರಕಾಶ್ ಮರ‌್ಗನಳ್ಳಿ, ಡಾ. ಶಂಬಾ ಜೋಶಿ ಅಧ್ಯಯನ ಪೀಠದ ಸಂಚಾಲಕ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net