

ವಿಜಯಪುರ: ಇಲ್ಲಿನ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಶಕ್ತಿ ಸಂಭ್ರಮ-2024ರ ಅಂಗವಾಗಿ ಸತತ ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆದ ಅಂತರ ಮಹಿಳಾ ವಿಶ್ವ ವಿದ್ಯಾಲಯಗಳ ಯುವಜನೋತ್ಸವಕ್ಕೆ ಶನಿವಾರ ತೆರೆ ಬಿದ್ದಿದ್ದು, ಹುಬ್ಬಳ್ಳಿಯ ಎಸ್‌ಜೆಎಂವಿಎಸ್ ಕಲಾ ಮತ್ತು ವಾಣಿಜ್ಯ ಮಹಿಳಾ ಕಾಲೇಜು ತಂಡ ಸಮಗ್ರ ವೀರಾಗ್ರಣಿ ಪ್ರಶಸ್ತಿ ಮುಡಿಗೇರಿಸಿಕೊಂಡರೆ ಕಲಬುರಗಿಯ ಗೋದುತಾಯಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಮಹಿಳಾ ಪದವಿ ಕಾಲೇಜು ತಂಡ ರನ್ನರ್ ಅಪ್ ಆಗಿ ಹೊರಹೊಮ್ಮಿತು.
ಯುವ ಜನೋತ್ಸವದಲ್ಲಿ ಸಂಗೀತ, ನೃತ್ಯ, ಸಾಹಿತ್ಯ, ರಂಗಭೂಮಿ ಮತ್ತು ಲಲಿತ ಕಲೆಗಳ ವಿಭಾಗದಲ್ಲಿ ನಾಟಕ, ಏಕಪಾತ್ರಾಭಿನಯ, ಮೂಕಾಭಿನಯ, ಚಿತ್ರಕಲೆ, ಜನಪದ ಕಲೆ, ಚರ್ಚೆ, ಭಾಷಣ, ಛಾಯಾಗ್ರಹಣ, ಜನಪದ ನೃತ್ಯ ಮತ್ತು ಕ್ವಿಜ್ ಮುಂತಾದ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿಜೇತ ತಂಡಗಳಿಗೆ ವಿಭಾಗವಾರು ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಂಗೀತ ವಿಭಾಗದಲ್ಲಿ ಹುಬ್ಬಳ್ಳಿಯ ಎಸ್‌ಜೆಎಂವಿಎಸ್ ಕಲಾ ಮತ್ತು ವಾಣಿಜ್ಯ ಮಹಿಳಾ ಕಾಲೇಜು ತಂಡ ಪ್ರಥಮ ಮತ್ತು ಕಲಬುರರ್ಗಿ ಗೋದುತಾಯಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಮಹಿಳಾ ಪದವಿ ಕಾಲೇಜು ತಂಡ ದ್ವಿತೀಯ ಸ್ಥಾನ ಪಡೆದವು.
ನೃತ್ಯ ವಿಭಾಗದಲ್ಲಿ ಕಲಬುರಗಿಯ ಶರಣೇಶ್ವರಿ ರೇಶ್ಮಿ ಮಹಿಳಾ ಬಿಇಡಿ ಕಾಲೇಜು ಪ್ರಥಮ ಹಾಗೂ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯ ಮಂಡ್ಯದ ಪಿಜಿ ಕೇಂದ್ರ ದ್ವಿತೀಯ ಸ್ಥಾನ ಪಡೆಯಿತು.
ಸಾಹಿತ್ಯ ವಿಭಾಗದಲ್ಲಿ ಸೇಡಂನ ಶ್ರೀಮತಿ ನರ್ಮದಾ ದೇವಿ ಗಿಳಿದಾ ಮಹಿಳಾ ಕಾಲೇಜು (ಪ್ರಥಮ ಸ್ಥಾನ) ಮತ್ತು ಇಳಕಲ್‌ನ ಎಸ್‌ವಿಎಂ ಕಲಾ ಮತ್ತು ವಾಣಿಜ್ಯ ಮಹಿಳಾ ಕಾಲೇಜು ತಂಡ ದ್ವಿತೀಯ ಸ್ಥಾನ ಪಡೆದವು.
ನಾಟಕ ವಿಭಾಗದಲ್ಲಿ ಕಲಬುರಗಿಯ ಶರಣೇಶ್ವರಿ ರೇಶ್ಮಿ ಮಹಿಳಾ ಬಿಇಡಿ ಕಾಲೇಜು ತಂಡ ಪ್ರಥಮ ಮತ್ತು ಕಲಬುರಗಿಯ ಶ್ರೀಮತಿ ವಿ.ಜಿ. ಮಹಿಳಾ ಪದವಿ ಕಾಲೇಜು ತಂಡ ದ್ವಿತೀಯ ಸ್ಥಾನ ಪಡೆದವು.
ಇನ್ನು ಲಲಿತ ಕಲೆಗಳ ವಿಭಾಗದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿ ತಂಡ ಪ್ರಥಮ ಮತ್ತು ಕಲಬುರಗಿಯ ಗೋದುತಾಯಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಮಹಿಳಾ ಪದವಿ ಕಾಲೇಜು ತಂಡ ದ್ವಿತೀಯ ಸ್ಥಾನ ಪಡೆದವು.
ಯುವಜನೋತ್ಸವದ ಉದ್ಘಾಟನಾ ಸಮಾರಂಭಕ್ಕೂ ಮುನ್ನ ನಡೆದ ಸಾಂಸ್ಕೃತಿಕ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ತಂಡಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡಗಳ ಪೈಕಿ ಮೊದಲ ಬಹುಮಾನವನ್ನು ಹುಬ್ಬಳ್ಳಿಯ ಎಸ್‌ಜೆಎಂವಿಎಸ್ ಕಲಾ ಮತ್ತು ವಾಣಿಜ್ಯ ಮಹಿಳಾ ಕಾಲೇಜು ತಂಡ ಪಡೆದಿವೆ. ಎರಡನೇ ಬಹುಮಾನವನ್ನು ಕಲಬುರಗಿಯ ಶ್ರೀಮತಿ ವಿ.ಜಿ. ಮಹಿಳಾ ಪದವಿ ಕಾಲೇಜು ತಂಡವು ಪಡೆದಿದೆ. ತೃತೀಯ ಬಹುಮಾನವನ್ನು ಕಲಬುರಗಿಯ ಶರಣೇಶ್ವರಿ ರೇಶ್ಮಿ ಮಹಿಳಾ ಬಿಇಡಿ ಕಾಲೇಜು ತಂಡವು ಪಡೆದುಕೊಂಡಿತು.
ವಿಜೇತ ತಂಡಗಳಿಗೆ ಮುಖ್ಯ ಅತಿಥಿಯಾಗಿದ್ದ ಡಾ.ಜಾವೀದ್ ಜಮಾದಾರ, ಕುಲಪತಿ ಪ್ರೊ.ಬಿ.ಕೆ. ತುಳಸಿಮಾಲ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ. ಚಂದ್ರಶೇಖರ್, ಸಿಂಡಿಕೇಟ್ ಸದಸ್ಯ ಡಾ.ಎಸ್.ಜೆ. ಮಾಡ್ಯಾಳ, ಯುವಜನೋತ್ಸವ ತಾಂತ್ರಿಕ ಸಮಿತಿ ಅಧ್ಯಕ್ಷ ಪ್ರೊ.ಪಿ.ಜಿ. ತಡಸದ, ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕಿ ಪ್ರೊ.ಶಾಂತಾದೇವಿ ಟಿ ಮತ್ತಿತರರಿದ್ದರು.