ನಿಮ್ಗೆ ಗೊತ್ತಾ ಅಫ್ರಿದಿ ಸಂಬಂಧಿಯೊಬ್ಬ ದೊಡ್ಡ ಟೆರರಿಸ್ಟ್... ಕಾಶ್ಮೀರದ ಮೇಲೆ ದಾಳಿ ಯತ್ನಿಸಿದ್ದ ಆದ್ರೆ ನಡೆದಿದ್ದು ಬೇರೆ! Shahid Afridi

Shahid Afridi
Published on

Shahid Afridi : ಶಾಹಿದ್ ಅಫ್ರಿದಿ..ಕ್ರಿಕೆಟ್ ಜಗತ್ತಿನಲ್ಲಿ ಈ ಹೆಸರು ಗೊತ್ತಿಲ್ಲದ ಜನರೇ ಇಲ್ಲ. ನಮ್ಮ ಸಾಂಪ್ರದಾಯಿಕ ಎದುರಾಳಿ ದೇಶ ಪಾಕಿಸ್ತಾನಕ್ಕಾಗಿ ಹಲವು ವರ್ಷಗಳ ಕಾಲ ಕ್ರಿಕೆಟ್ ಆಡಿದ್ದಾರೆ. ಕೇವಲ ಕ್ರಿಕೆಟ್​ ಆಡಿಕೊಂಡು ಇದ್ದಿದ್ದರೆ ಸರಿಯಾಗ್ತಾ ಇತ್ತು ಆದರೆ, ಬೇಡದ ಮಾತುಗಳನ್ನಾಡಿ ಅನೇಕ ಸಂದರ್ಭಗಳಲ್ಲಿ ವಿವಾದವನ್ನು ಮೈಮೇಲೆ ಎಳೆದುಕೊಂಡು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಮತ್ತು ಗುರಿಯಾಗುತ್ತಲೇ ಇದಾರೆ.

ಅಫ್ರಿದಿ ಅನೇಕ ಬಾರಿ ಭಾರತ ಮತ್ತು ಹಿಂದೂಗಳ ವಿರುದ್ಧ ತಮ್ಮ ದ್ವೇಷವನ್ನು ಹೊರಹಾಕಿದ್ದಾರೆ. ಭಾರತೀಯರನ್ನು ಕೆರಳಿಸುವಂತಹ ಮಾತುಗಳನ್ನಾಡಿದ್ದಾರೆ. ಇತ್ತೀಚೆಗೆ, ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಉಗ್ರರ ದಾಳಿಯ ನಂತರ, ಭಾರತೀಯ ಸೇನೆಯ ವಿರುದ್ಧ ಅಫ್ರಿದಿ ಅನುಚಿತ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಅಲ್ಲದೆ, ಭಯೋತ್ಪಾದನೆಯನ್ನು ಬೆಂಬಲಿಸುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಅಫ್ರಿದಿಗೆ ಬಿಗ್​ ಶಾಕ್​ ನೀಡಿದ್ದು, ಅವರ ಯೂಟ್ಯೂಬ್ ಚಾನೆಲ್ ಅನ್ನು ಬ್ಯಾನ್​ ಮಾಡಿದೆ.

ಇದೆಲ್ಲ ಒಂದು ಕಡೆಯಾದರೆ, ಮತ್ತೊಂದೆಡೆ, ಅಫ್ರಿದಿ ಅವರು ಪಾಕ್​ ಸರ್ಕಾರ, ಅಲ್ಲಿನ ಮಿಲಿಟರಿ ಮತ್ತು ಗುಪ್ತಚರ ಸಂಸ್ಥೆಗಳೊಂದಿಗೆ ಬಹಳ ನಿಕಟ ಸಂಪರ್ಕವನ್ನು ಹೊಂದಿದ್ದಾರೆ. ಇದಲ್ಲದೆ, ಅಫ್ರಿದಿಯ ಸಂಬಂಧಿಕರಲ್ಲಿ ಒಬ್ಬ ಭಯೋತ್ಪಾದಕ ಕಮಾಂಡರ್ ಆಗಿದ್ದ. ಹೌದು, ಅಫ್ರಿದಿಯ ಸೋದರಸಂಬಂಧಿ ಶಕೀಬ್ ಅಫ್ರಿದಿ ಭಯೋತ್ಪಾದಕ ಸಂಘಟನೆ "ಹರ್ಕತ್-ಉಲ್-ಅನ್ಸಾರ್"ನ ಕಮಾಂಡರ್ ಆಗಿ ಕಾರ್ಯನಿರ್ವಹಿಸಿದ್ದಾನೆ.

ಈ ಶಕೀಬ್​ ಆಫ್ರಿದಿ, 2003ರ ಸೆಪ್ಟೆಂಬರ್ ತಿಂಗಳಲ್ಲಿ ಕಾಶ್ಮೀರದ ಮೇಲೆ ದಾಳಿ ಮಾಡಲು ಯತ್ನಿಸಿದ್ದ. ಅನಂತ್‌ನಾಗ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಭಾರತೀಯ ಭದ್ರತಾ ಪಡೆಗಳು, ಶಕೀಬ್​ ಅಫ್ರಿದಿಯನ್ನ ಹೊಡೆದುರುಳಿಸಿದರು. ಈ ಕಾರ್ಯಾಚರಣೆಯ ಸಮಯದಲ್ಲಿ ವಶಪಡಿಸಿಕೊಂಡ ದಾಖಲೆಗಳ ಮೂಲಕ ಬಿಎಸ್‌ಎಫ್, ಆತನ ಗುರುತನ್ನು ದೃಢಪಡಿಸಿತು. ಶಕೀಬ್ ತನ್ನ ಸಾವಿಗೂ 2 ವರ್ಷಗಳ ಮೊದಲು ಕಾಶ್ಮೀರ ಪ್ರದೇಶದಲ್ಲಿ ಸಕ್ರಿಯನಾಗಿದ್ದ.

ಅಂದಹಾಗೆ, ಶಾಹಿದ್​ ಅಫ್ರಿದಿ ಅವರ ಕುಟುಂಬವು ಪಾಕಿಸ್ತಾನದ ರಕ್ಷಣಾ ಮತ್ತು ಐಎಸ್ಐ ವಲಯಗಳಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ಹೊಂದಿದೆ. ಅವರ ಮಗಳು ಅನ್ಶಾನಿ ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ ಅವರನ್ನು ವಿವಾಹವಾದರು. ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ಐಎಸ್‌ಪಿಆರ್) ನ ಮಾಜಿ ಮಹಾನಿರ್ದೇಶಕ ಅಸಿಮ್ ಸಲೀಮ್ ಬಜ್ವಾ ಕೂಡ ವಿವಾಹದಲ್ಲಿ ಉಪಸ್ಥಿತರಿದ್ದರು.

ಅಫ್ರಿದಿ ಅವರ ಕುಟುಂಬದ ಭಯೋತ್ಪಾದಕ ಚಟುವಟಿಕೆಗಳ ಸಂಪರ್ಕ ಮತ್ತು ಪಾಕಿಸ್ತಾನಿ ಮಿಲಿಟರಿ ವಲಯಗಳೊಂದಿಗಿನ ಸಂಪರ್ಕವು ಅನೇಕ ಸಂದರ್ಭಗಳಲ್ಲಿ ಅಫ್ರಿದಿ, ಭಾರತ ವಿರೋಧಿ ಮತ್ತು ಭಯೋತ್ಪಾದನಾ ಪರ ಹೇಳಿಕೆಗಳನ್ನು ನೀಡಲು ಕಾರಣವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net