

ಕಾಸರಗೋಡು: ಮುಂದಿನ ಕೆಲವೇ ತಿಂಗಳುಗಳಲ್ಲಿ ಅಯ್ಯಪ್ಪಸ್ವಾಮಿ ಮಂಡಲ ಪೂಜೆ ಶುರುವಾಗಲಿದ್ದು, ಶಬರಿಮಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ತೆರಳಲಿದ್ದಾರೆ. ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದೇವಸ್ವಂ ಮಂಡಳಿಯು ಮೂಲ ಸೌಕರ್ಯ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸುಧಾರಿತ ವ್ಯವಸ್ಥೆ ಜಾರಿಗೆ ತರಲು ಸಿದ್ಧತೆ ನಡೆಸಿದೆ.
ಅದರಂತೆ ಪ್ರತಿದಿನ 80 ಸಾವಿರ ಭಕ್ತಾದಿಗಳಿಗೆ ದೇವರ ದರ್ಶನದ ವ್ಯವಸ್ಥೆ ಹಾಗೂ ನಿಲಕ್ಕಲ್‌ನಲ್ಲಿ 10 ಸಾವಿರಕ್ಕೂ ಹೆಚ್ಚು ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ, ರೋಪ್ವೇ ಯೋಜನೆ ಅನುಷ್ಠಾನಕ್ಕೆ ಮಂಡಳಿ ಯೋಜನೆ ರೂಪಿಸಿದ್ದು, ದೇವಸ್ಥಾನಕ್ಕೆ ಬರುವ ಭಕ್ತರನ್ನು ಬಿಸಿಲು ಹಾಗೂ ಮಳೆಯಿಂದ ರಕ್ಷಿಸಲು ಮೇಲ್ಛಾವಣಿ ನಿರ್ಮಾಣಕ್ಕೆ ದೇವಸ್ವಂ ಮಂಡಳಿ ಚಾಲನೆ ನೀಡಲು ಮುಂದಾಗಿದೆ.
ಈ ಕುರಿತು ಮಾತನಾಡಿರುವ ದೇವಸ್ವಂ ಮಂಡಳಿಯ ಹಿರಿಯ ಸದಸ್ಯರೊಬ್ಬರು, ಮೂಲ ಸೌಕರ್ಯ ಅಭಿವೃದ್ಧಿ ಭಾಗವಾಗಿ ಲೋಕೋಪಯೋಗಿ ಇಲಾಖೆಯು ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆಯ ಟೆಂಡರ್ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಚಾಲಕ್ಕಯಂ ವಿಭಾಗದಲ್ಲಿ ಉತ್ತಮ ರಸ್ತೆಗಳಿದ್ದರೂ ಗಮನಕ್ಕೆ ಬಂದ ಕೆಲವೊಂದು ಸಮಸ್ಯೆಗಳನ್ನು ಬಿಎಂಬಿಸಿ ಪರಿಹರಿಸಲಿದೆ. ನಿಲಕ್ಕಲ್‌ನಲ್ಲಿ ಪ್ರಸ್ತುತ 8 ಸಾವಿರ ವಾಹನಗಳ ನಿ ಲುಗಡೆಗೆ ಅವಕಾಶವಿದ್ದು, ಇಲ್ಲಿ ಹತ್ತು ಸಾವಿರಕ್ಕೂ ಅಧಿಕ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗುವುದು.
ಎರುಮೇಲಿಯಲ್ಲಿ 1,100 ವಾಹನಗಳ ನಿಲುಗಡೆ ವ್ಯವಸ್ಥೆಯನ್ನು 2 ಸಾವಿರಕ್ಕೆ ಹೆಚ್ಚಿಸಲಾಗುವುದು. ಇದಕ್ಕಾಗಿ ಅಗತ್ಯವಿರುವ ಆರು ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲು ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ಈ ಸಂಬಂಧ ಶೀಘ್ರ ಸಭೆ ನಡೆಸಲಾಗುವುದು ಎಂದು ದೇವಸ್ವಂ ಮಂಡಳಿಯ ಹಿರಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.