

ಬೆಂಗಳೂರು: 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಜೀವಮಾನ ಸಾಧನೆ ಪ್ರಶಸ್ತಿಗೆ ಹಿರಿಯ ನಟಿ ಶಬಾನಾ ಅಜ್ಮಿ(Shabana Azmi) ಅವರು ಆಯ್ಕೆಯಾಗಿದ್ದಾರೆ. 2024-25ನೇ ಸಾಲಿನ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಜೀವಮಾನ ಸಾಧನೆ ಪ್ರಶಸ್ತಿ ಆಯ್ಕೆಗೆ ರಚಿಸಿದ್ದ ಆಯ್ಕೆ ಸಮಿತಿಯು ಮೂವರು ಸಂಭಾವ್ಯರನ್ನು ಆಯ್ಕೆ ಮಾಡಿ ಪಟ್ಟಿ ಸಲ್ಲಿಸಿತ್ತು. ಆಯ್ಕೆಯಾಗಿದ್ದ ಮೂವರಲ್ಲಿ ನಟಿ ಶಬಾಬಾ ಅಜ್ಮಿ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ನಟಿ ಶಬಾನಾ ಅಜ್ಮಿ ಪರಿಚಯ:
ಶಬಾನಾ ಅಜ್ಮಿ ಸೆಪ್ಟೆಂಬರ್ 18, 1950ರಂದು ಹೈದರಾಬಾದ್‌ನಲ್ಲಿ ಪ್ರಸಿದ್ಧ ಕವಿ ಕೈಫಿ ಅಜ್ಮಿ ಮತ್ತು ಶೌಕತ್ ಅಜ್ಮಿ ದಂಪತಿಗೆ ಜನಿಸಿದರು. ಶಬಾನಾ ತಮ್ಮ 24ನೇ ವಯಸ್ಸಿನಲ್ಲಿ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರ ಮೊದಲ ಚಿತ್ರ 'ಅಂಕುರ್'. 1974 ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಅವರ ನಟನೆಯು ಹೆಚ್ಚಿನ ಮೆಚ್ಚುಗೆ ಪಡೆಯಿತು.
ಶಬಾನಾ ಅವರ ಮೊದಲ ಚಿತ್ರಕ್ಕೆ ಅತ್ಯುತ್ತಮ ನಟಿ ರಾಷ್ಟ್ರೀಯ ಪ್ರಶಸ್ತಿ ಲಭಿಸಿತು. ಅಂದ್ಹಾಗೆ ಗರಿಷ್ಠ ಬಾರಿ ರಾಷ್ಟ್ರೀಯ ಪ್ರಶಸ್ತಿ ಗೆದ್ದ ದಾಖಲೆಯೂ ಶಬಾನಾ ಹೆಸರಿನಲ್ಲಿದೆ. ಅಂಕುರ್ ನಂತರ ಶಬಾನಾ 1982ರ ಚಿತ್ರ 'ಆರ್ಥ್', 1983ರ ಚಿತ್ರ 'ಕಂದಹಾರ್' ಮತ್ತು 1984ರ ಚಿತ್ರ 'ಪಾರ್'ಗಾಗಿ ಅತ್ಯುತ್ತಮ ನಟಿಗಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಶಬಾನಾ ಅಜ್ಮಿ ಕೂಡ ಸತತ ಮೂರು ವರ್ಷಗಳ ಕಾಲ ರಾಷ್ಟ್ರೀಯ ಪ್ರಶಸ್ತಿ ಗೆದ್ದ ನಟಿ. 1999ರ 'ಗಾಡ್‌ಮದರ್' ಚಿತ್ರಕ್ಕಾಗಿ ಶಬಾನಾ ತಮ್ಮ ಐದನೇ ಅತ್ಯುತ್ತಮ ನಟಿ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದಿದ್ದಾರೆ.
ಶಬಾನಾ ಅಜ್ಮಿ 'ಫೈರ್', 'ನಿಶಾಂತ್', 'ಜುನೂನ್', 'ತುಮ್ಹಾರಿ ಅಮೃತ', 'ಫೈರ್', 'ಮಕ್ದಿ' ಮತ್ತು 'ಮೃತ್ಯುದಂಡ್' ಚಿತ್ರಗಳಲ್ಲಿ ಕೆಲಸ ಮಾಡಿ ಯಶಸ್ವಿ ನಟಿ ಎಂಬ ಪಟ್ಟಿಗೆ ಸೇರ್ಪಡೆಯಾದರು. ಶಬಾನಾ ಅಜ್ಮಿಯವರ ಸಿನಿಮಾ ಪ್ರಯಾಣ ಇನ್ನೂ ಮುಂದುವರಿದಿದೆ. ಜುಲೈ 2023ರಲ್ಲಿ ಬಿಡುಗಡೆಯಾದ ಕರಣ್ ಜೋಹರ್ ಅವರ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದಲ್ಲೂ ಅವರು ಕಾಣಿಸಿಕೊಂಡರು.