

ಹಾಸನ: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಚಾರಣೆಯನ್ನು ಜೂ.24ಕ್ಕೆ ಮುಂದೂಡಿದೆ.
ಎರಡನೇ ಕೇಸ್‍ನಲ್ಲಿ ಬಾಡಿ ವಾರೆಂಟ್ ಪಡೆದಿದ್ದ ವಿಶೇಷ ತನಿಖಾ ತಂಡ, ಇಂದು ಕೋರ್ಟ್‍ಗೆ ಹಾಜರುಪಡಿಸಿತು. ಅರ್ಜಿ ವಿಚಾರಣೆ ನಡೆಸಿದ ನ್ಯಾ.ಸಂತೋಷ್ ಗಜಾನನ ಭಟ್, ಎಸ್‍ಐಟಿಗೆ ನೋಟಿಸ್ ನೀಡಿ ಅರ್ಜಿ ವಿಚಾರಣೆಯನ್ನು ಮುಂದೂಡಿದ್ದಾರೆ. ಈ ಮೂಲಕ ಪ್ರಜ್ವಲ್‍ಗೆ ನ್ಯಾಯಾಂಗ ಬಂಧನ ಮುಂದುವರಿಸಲಾಗಿದೆ.
ಹಾಸನದಲ್ಲಿ ವೈರಲ್ ಆದ ಅಶ್ಲೀಲ ವಿಡಿಯೋ ಹಾಗೂ ಅತ್ಯಾಚಾರ ಆರೋಪದಲ್ಲಿ ಪ್ರಜ್ವಲ್ ರೇವಣ್ಣ ಅವರು ಜೈಲು ಪಾಲಾಗಿದ್ದಾರೆ. ಅತ್ಯಾಚಾರ ಆರೋಪ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅವರ ನ್ಯಾಯಾಂಗ ಬಂಧನ ಅವಧಿ ಇಂದಿಗೆ ಅಂತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಇಂದು (ಜೂ.18) ಆರೋಪಿ ಪ್ರಜ್ವಲ್ ರೇವಣ್ಣ ಅವರನ್ನು ಕೋರ್ಟ್‌ಗೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಪ್ರಜ್ವಲ್ ರೇವಣ್ಣ ಅವರನ್ನು ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ʼಮತ್ತೆ ಮತ್ತೆ ಅದನ್ನು ತೋರಿಸೋಕೆ ಮುಜುಗರ: ನ್ಯಾಯಾಲಯದ ವಿಚಾರಣೆ ವೇಳೆ ನ್ಯಾಯಾದೀಶರ ಎದುರು ಪ್ರಜ್ವಲ್ ರೇವಣ್ಣ ಅಳಲು ತೋಡಿಕೊಂಡಿದ್ದಾರೆ. ನಾನು ಎರಡು ಪ್ರಕರಣದಲ್ಲಿ ಮೆಡಿಕಲ್ ಟೆಸ್ಟ್ ಮಾಡಿಸಿಕೊಂಡಿದ್ದೇನೆ. ಮತ್ತೆ ಅದೇ ಟೆಸ್ಟ್ ಮಾಡಿಸಲು ಹೇಳುತ್ತಾರೆ. ಇದು ತುಂಬಾ ಮುಜುಗರ ಆಗತ್ತೆ. ಈ ಮುಜುಗರದಿಂದ ಪಾರು ಮಾಡಿ” ಎಂದು ಪ್ರಜ್ವಲ್ ನ್ಯಾಯಾಧೀಶರ ಮುಂದೆ ವಿನಂತಿಸಿಕೊಂಡರು. ಅಗತ್ಯ ವೈದ್ಯಕೀಯ ಪರೀಕ್ಷೆಗಳನ್ನು ಮಾತ್ರ ಮಾಡಿಸುವಂತೆ ನ್ಯಾಯಾಧೀಶರು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಪ್ರಜ್ವಲ್ ರೇವಣ್ಣ ಅವರ ಮೇಲೆ ಮೂರು ಪ್ರಕರಣಗಳಿದ್ದು, ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ಪೂರ್ಣಗೊಂಡಿದ್ದು, ಪುರುಷತ್ವ ಪರೀಕ್ಷೆ ಮಾಡಲಾಗಿದೆ. ಮೂರನೆ ಬಾರಿಗೆ ಎಸ್‌ಐಟಿ ಪ್ರಜ್ವಲ್ ಅವರನ್ನು ಕಸ್ಟಡಿಗೆ ಪಡೆದುಕೊಂಡಿದೆ. ಮತ್ತೆ ಮೆಡಿಕಲ್ ಪರೀಕ್ಷೆಗೆ ಮುಂದಾಗಿದ್ದು, ಈ ಸಂದರ್ಭದಲ್ಲಿ ಪ್ರಜ್ವಲ್ ಆಕ್ಷೇಪಿಸಿದರು.
ಎಸ್ಐಟಿ ಅಧಿಕಾರಿಗಳು ಸರಿಯಾಗಿ ನೋಡ್ಕೋತಿಲ್ಲ” ಎಂದು ಪ್ರಜ್ವಲ್ ಹೇಳಿದ್ದಲ್ಲದೆ, “ಎಂಆರ್‌ಐ ಸ್ಕ್ಯಾನ್ ಮಾಡಿಸಿದ್ದೇನೆ. ಟ್ಯಾಬ್ಲೆಟ್ ತೆಗೆದುಕೊಳ್ತಿದ್ದೇನೆ” ಎಂದು ಹೇಳಿದಾಗ, ʼಆರೋಗ್ಯ ತಪಾಸಣೆ ಯಾಕೆ ಮಾಡಿಸಿಲ್ಲ?ʼ ಎಂದು ಅಧಿಕಾರಿಗಳನ್ನು ನ್ಯಾಯಾಧೀಶರು ಪ್ರಶ್ನಿಸಿದರು. “ಅವರು ಈಗ ಹೇಳ್ತಾ ಇದ್ದಾರೆ, ನಮಗೆ ಹೇಳಿಲ್ಲ” ಎಂದು ಎಸ್ಐಟಿ ಅಧಿಕಾರಿಗಳು ಉತ್ತರಿಸಿದರು.
ನಂತರ 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ನೀಡಿ ನ್ಯಾಯಾಧೀಶರು ಆದೇಶ ಹೊರಡಿಸಿದರು. ಪರಪ್ಪನ ಆಗ್ರಹಾರ ಕೇಂದ್ರ ಕಾರಾಗೃಹದತ್ತ ಅವರನ್ನು ಕರೆದೊಯ್ಯಲಾಗಿದೆ. ನ್ಯಾಯಾಂಗ ಬಂಧನಕ್ಕೆ ಹೋದರೂ ನಾಳೆ ಮತ್ತೆ ಬಾಡಿ ವಾರಂಟ್ ಮೇಲೆ ಅವರನ್ನು ಕಸ್ಟಡಿಗೆ ಪಡೆಯಲು ಎಸ್ಐಟಿ ಮುಂದಾಗಿದೆ. ಸಿಐಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕೇಸ್‌ಗೆ ಸಂಬಂಧಿಸಿ ವಶಕ್ಕೆ ಪಡೆಯಲಿದೆ.
ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣ: ಲೋಕಸಭೆ ಚುನಾವಣೆಗೆ ರಾಜ್ಯದ ಮೊದಲ ಹಂತದ ಮತದಾನ (ಏ.26)ಕ್ಕೂ ಮುನ್ನ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ್ ವಿಡಿಯೋಗಳ ಪೆನ್ಡ್ರೈವ್ ಹಾಸನ ಜಿಲ್ಲೆಯಲ್ಲಿ ಹರಿದಾಡಲು ಆರಂಭಿಸಿತು. ಈ ಸಂಬಂಧ ಕಳೆದ ತಿಂಗಳು ಏಪ್ರಿಲ್ 23 ರಂದು ಹಾಸನ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದರ ನಡುವೆ ತಮ್ಮ ಮನೆಯ ಮಹಿಳಾ ಕೆಲಸದಾಳಿಗೆ ಲೈಂಗಿಕ ದೌರ್ಜನ್ಯ, ಕಿರುಕುಳ ನೀಡಿದ ಆರೋಪದ ಮೇರೆಗೆ ಹೊಳೆ ನರಸೀಪುರ ಪೊಲೀಸ್ ಠಾಣೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಹೆಚ್ಡಿ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ.