ಚಾಲಕನಿಂದ ಲೈಂಗಿಕ ಕಿರುಕುಳ : 5 ಲಕ್ಷ ರೂ. ಪರಿಹಾರಕ್ಕೆ ಓಲಾಗೆ ಆದೇಶ

highcourt
Published on

ಬೆಂಗಳೂರು: ಪ್ರಯಾಣದ ವೇಳೆ ಕ್ಯಾಬ್ ಚಾಲಕನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಯುವತಿಗೆ ಪರಿಹಾರವಾಗಿ 5 ಲಕ್ಷ ರೂ. ನೀಡುವಂತೆ ಓಲಾ ಕ್ಯಾಬ್‌ನ ಮಾತೃ ಸಂಸ್ಥೆ ಎಎನ್‌ಐ ಟೆಕ್ನಾಲಜೀಸ್ ಪ್ರೈ. ಲಿ.ಗೆ ಹೈಕೋರ್ಟ್ ನಿರ್ದೇಶಿಸಿದೆ.

ಪ್ರಕರಣ ಸಂಬಂಧ ನೀಡಿರುವ ದೂರಿನ ಕುರಿತು ತನಿಖೆ ನಡೆಸಲು ಕಂಪೆನಿಯ ಆಂತರಿಕ ದೂರು ಸಮಿತಿಗೆ ನಿರ್ದೇಶಿಸಬೇಕು ಎಂದು ಕೋರಿ ಸಂತ್ರಸ್ತೆ ಸಲ್ಲಿಸಿದ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ ತೀರ್ಪನ್ನು ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ಅವರ ಏಕಸದಸ್ಯ ಪೀಠ ಸೋಮವಾರ ಪ್ರಕಟಿಸಿದೆ. ಆದೇಶ ವಿಸ್ತೃತ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ವಾದ- ಪ್ರತಿವಾದ ಆಲಿಸಿದ ನ್ಯಾಯಪೀಠ 2013ರ ಮಹಿಳೆಯರಿಗೆ ಲೈಂಗಿಕ ಕಿರುಕುಳ ನಿಷೇಧ, ತಡೆ ಮತ್ತು ಪರಿಹಾರ ಕಾಯ್ದೆಯ ವಿವಿಧ ಕಲಂಗಳ ಅನ್ವಯ ದೂರಿನ ಕುರಿತು ತನಿಖೆ ನಡೆಸುವಂತೆ ಕಂಪನಿಯ ಆಂತರಿಕ ದೂರುಗಳ ಸಮಿತಿಗೆ ನಿರ್ದೇಶನ ನೀಡಿದೆ. ಮಾತ್ರವಲ್ಲದೆ, 90 ದಿನಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು ಎಂದಿದೆ.

ಕಾಯ್ದೆಯ ಸೆಕ್ಷನ್ 16ರ ಅನುಸಾರ ಈ ಪ್ರಕರಣದಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಗುರುತನ್ನು ಬಹಿರಂಗಪಡಿಸದಂತೆ ನೋಡಿಕೊಳ್ಳಲು ಮಧ್ಯಸ್ಥಗಾರರಿಗೆ ನ್ಯಾಯಾಲಯವು ಎಚ್ಚರಿಕೆ ನೀಡಿದೆ. ಜತೆಗೆ ಅರ್ಜಿದಾರರಿಗೆ ವ್ಯಾಜ್ಯ ವೆಚ್ಚವಾಗಿ ಹೆಚ್ಚುವರಿ 50,000 ರೂ. ಪಾವತಿಸುವಂತೆ ಸೂಚಿಸಲಾಗಿದೆ.

ಅರ್ಜಿದಾರರು 2019ರಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದರು ಮತ್ತು ಚಾಲಕನ ವಿರುದ್ಧ ಕ್ರಮ ಕೋರಿ ಎಎನ್‌ಐ ಟೆಕ್ನಾಲಜೀಸ್‌ಗೆ ನೀಡಿದ ದೂರನ್ನು ಸಂಸ್ಥೆ ಪರಿಗಣಿಸಲಿಲ್ಲ. ಆಂತರಿಕ ದೂರುಗಳ ಸಮಿತಿಯು ಈ ವಿಷಯದ ಬಗ್ಗೆ ವಿಚಾರಣೆ ನಡೆಸುವ ಅಧಿಕಾರವನ್ನು ಹೊಂದಿಲ್ಲ ಎಂದು ‘ಬಾಹ್ಯ ಕಾನೂನು ಸಲಹೆಗಾರ’ ಹೇಳಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net