

ಸಿದ್ದಾಪುರ: ಯುವಕನೊಬ್ಬ ಕಾಡಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ ಸಾವಿಗೂ ಮುಂಚೆ ಮಾಡಿರುವ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೈಸ್ಕೂಲ್ ವಿದ್ಯಾರ್ಥಿಗಳನ್ನು ಕೆಲವರು ತಮ್ಮ ಕಾಮ ತೃಷೆಗೆ ಬಳಸಿಕೊಳ್ಳುತ್ತಿರುವ ಬಗ್ಗೆ ಯುವಕ ವಿಡಿಯೋದಲ್ಲಿ ದೂರಿದ್ದಾನೆ. ಆ ವಿಚಾರ ತಾಲೂಕಿನಲ್ಲಿ ತಲ್ಲಣ ಮೂಡಿಸಿದೆ.
ಸಿದ್ದಾಪುರ ತಾಲೂಕಿನ ಗಡಿಯಲ್ಲಿರುವ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಿಕ್ಕ ತೌಡತ್ತಿ ಗ್ರಾಮದ ಸಂತೋಷ ಗಣಪತಿ ನಾಯ್ಕ(26) ತಾಲೂಕಿನ ಕಾಳೇನಳ್ಳಿ ಸಮೀಪದ ಕಾಡಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಚನಮಾಂವನ ಚರಣ, ಮನೋಜ ಹಾಗೂ ಲೋಕೇಶ ಎಂಬುವವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಮೂವರ ಜತೆ ಇನ್ನೂ ನಾಲ್ವರು ಸೇರಿ ತನ್ನ ಮಗನಿಗೆ ಜೀವ ಬೆದರಿಕೆ ಹಾಕಿದ್ದರು ಎಂದು ಮೃತನ ತಂದೆ ಗಣಪತಿ ನಾರಾಯಣ ನಾಯ್ಕ ಅವರು ಸಿದ್ದಾಪುರ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ತಾಲೂಕಿನ ಕೆಲವರು ಹೈಸ್ಕೂಲ್ ವಿದ್ಯಾರ್ಥಿಗಳನ್ನು ತಮ್ಮ ಕಾಮ ತೃಷೆಗಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಸಂತೋಷ ತಾನು ಮಾಡಿದ ವಿಡಿಯೋದಲ್ಲಿ ಆರೋಪಿಸಿದ್ದಾನೆ. ಹೈಸ್ಕೂಲ್ ವಿದ್ಯಾರ್ಥಿನಿಯರು ಎಚ್ಚರದಿಂದಿರಿ ಎಂದು ಎಚ್ಚರಿಸಿದ್ದಾನೆ. `ನಾನು ಒಬ್ಬ ಹುಡುಗಿಯನ್ನು ಪ್ರೀತಿಸಿದ್ದೆ. ಆಕೆಗಾಗಿ ನಾನು ಇಂಥ ಕೃತ್ಯದ ಬಗ್ಗೆ ಮಾಹಿತಿ ಕಲೆ ಹಾಕಿದೆ. ನಾನು ಒಂದು ಹುಡುಗಿಯ ಹೆಸರಿನಲ್ಲಿ ನಕಲಿ ಜಾಲತಾಣ ಖಾತೆ ಸೃಷ್ಟಿ ಮಾಡಿ ಅವರ ಜತೆ ಚಾಟ್ ಮಾಡಿದೆ. ಅವರು ಅಪ್ರಾಪ್ತ ಹೆಣ್ಣು ಮಕ್ಕಳನ್ನು ನಂಬಿಸಿ ಮೋಸ ಮಾಡುತ್ತಿರುವುದು ಬೆಳಕಿಗೆ ಬಂತು. ಬಾಲಕಿಯರನ್ನು ತಮ್ಮ ಕಾಮ ತೃಷೆಗಾಗಿ ಬಳಸಿಕೊಳ್ಳುತ್ತಿದ್ದರು. ಅದರ ಫೋಟೋ ವಿಡಿಯೋ ಮಾಡುತ್ತಿದ್ದರು ಎಂದು ಆತನ ಪ್ರೇಯಸಿಯ ಜತೆ ಮಾಡಿದ ಅಶ್ಲೀಲ ಚಾಟ್‌ಗಳನ್ನು ಹಾಗೂ ಕೆಲವು ಅಶ್ಲೀಲ ಫೋಟೋಗಳನ್ನು ವಿಡಿಯೋಗೆ ಸೇರಿಸಿದ್ದಾನೆ.
ನಾನು ಅವರ ವಿರುದ್ಧ ದಾಖಲೆ ಕಲೆ ಹಾಕುತ್ತಿರುವುದು ತಿಳಿಯುತ್ತಿದ್ದಂತೆ ಅವರು ನನಗೆ ಜೀವ ಬೆದರಿಕೆ ಹಾಕಿದರು. ನನ್ನ ಮನೆಗೆ ಬಂದು ನನ್ನ ಟ್ಯಾಬ್ ಕದ್ದೊಯ್ದರು ಎಂದು ದೂರಿದ್ದಾನೆ. ಯುವಕ ಡೆತ್ ನೋಟ್ ಸಹ ಬರೆದಿಟ್ಟಿದ್ದು, ರಾಜಕೀಯ ಪಕ್ಷವೊಂದರ ಮುಖಂಡ, ಒಬ್ಬ ವಕೀಲನ ಹೆಸರನ್ನೂ ಆತ ಹೇಳಿದ್ದಾನೆ ಎನ್ನಲಾಗಿದೆ. ಕೆಲವು ಮೊಬೈಲ್ ನಂಬರ್‌ಗಳನ್ನು ತೋರಿಸುವ ಮೂಲಕ ವಿಡಿಯೋದಲ್ಲಿ ಸಾಕ್ಷ್ಯ ಒದಗಿಸಿದ್ದಾನೆ. ನಾನು ನಕಲಿ ಖಾತೆ ಸೃಷ್ಟಿ ಮಾಡಿ ಚಾಟ್ ಮಾಡಿ ತಪ್ಪು ಮಾಡಿದ್ದು ನಿಜ. ನನ್ನ ಪ್ರೇಯಸಿಗಾಗಿ ಇಷ್ಟೆಲ್ಲ ಮಾಡಿದೆ. ಆದರೆ, ಆಕೆಯೇ ನನ್ನ ವಿರುದ್ಧ ನಿಂತಿದ್ದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಸಂತೋಷ ವಿಡಿಯೋದಲ್ಲಿ ಹೇಳಿದ್ದಾನೆ.
ತಾಲೂಕಿನಲ್ಲಿ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡ ಯುವಕ ಮಾಡಿ ಹರಿಬಿಟ್ಟಿರುವ ವಿಡಿಯೋದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕೆಲವು ಮುಖಂಡರ ಬಗ್ಗೆ ಹೇಳಿದ್ದು, ಅವರ ಮೇಲೆ ಕ್ರಮ ವಹಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ತಮ್ಮ ಪ್ರಭಾವ ಬಳಸಿ ಸ್ಥಳೀಯ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದ್ದು, ಎಸ್‌ಪಿ ಗಮನ ಹರಿಸಿ ತನಿಖೆಗೆ ಬೇರೆ ತಾಲೂಕಿನ ಅಧಿಕಾರಿಗಳನ್ನು ನೇಮಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸರ್ಕಾರಿ ವಸತಿಗೃಹ ಸೇರಿದಂತೆ ಸರ್ಕಾರಿ ವ್ಯವಸ್ಥೆಯನ್ನು ಕಾಂಗ್ರೆಸ್ ಮುಖಂಡರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮಹಿಳೆಯರ ಮೇಲೆ ದೌರ್ಜನ್ಯವೂ ನಡೆಯುತ್ತಿದೆ. ಮೃತ ಯುವಕ ವಿಡಿಯೋ ಮಾಡಿದ್ದಾನೆ. ಅಲ್ಲದೇ ಡೆತ್ ನೋಟ್ ಕೂಡ ಬರೆದಿದ್ದರೂ ಸಿದ್ದಾಪುರ ಠಾಣೆಯಲ್ಲಿ ಬುಧವಾದ ದಾಖಲಾದ ಎಫ್‌ಐಆರ್‌ನಲ್ಲಿ ಅದ್ಯಾವುದನ್ನೂ ನಮೂದಿಸಿಲ್ಲ. ಎಲ್ಲ ಪ್ರಕರಣವನ್ನು ಮುಚ್ಚಿ ಹಾಕುವ ಸಾಧ್ಯತೆ ಇದೆ. ಇದಕ್ಕೆಲ್ಲ ಯಾರ್ಯಾರು ಕಾರಣೀಕರ್ತರು ಎಂಬುದನ್ನು ಪರಿಶೀಲಿಸಿ ಅವರನ್ನು ಬಂಧಿಸಬೇಕು. ಇಲ್ಲದಿದ್ದಲ್ಲಿ ಠಾಣೆಯ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದರು.
ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಕೆ.ಜಿ.ನಾಯ್ಕ ಹಣಜೀಬೈಲ್ ಮಾತನಾಡಿ, ಮೃತ ಉಲ್ಲೇಖಿಸಿದ ವ್ಯಕ್ತಿಗಳ ವಿರುದ್ಧ ಫೋಕ್ಸೊ ಹಾಗೂ ಕೊಲೆ ಪ್ರಕರಣ ದಾಖಲಿಸಬೇಕು. ನಾವು ಇಲ್ಲಿ ರಾಜಕೀಯ ಮಾಡುತ್ತಿಲ್ಲ. ಮಾನವೀಯತೆ ದೃಷ್ಟಿಯಿಂದ ಹೋರಾಟಕ್ಕೆ ಮುಂದಾಗುತ್ತಿದ್ದೇವೆ ಎಂದರು. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯ್ಕ, ಮಂಡಲ ಅಧ್ಯಕ್ಷ ತಿಮ್ಮಪ್ಪ ಎಂ.ಕೆ.,ಪ್ರಧಾನ ಕಾರ್ಯದರ್ಶಿಗಳಾದ ಎಸ್.ಕೆ.ಮೇಸ್ತ, ತೋಟಪ್ಪ ನಾಯ್ಕ ಇತರರಿದ್ದರು.