

ನವದೆಹಲಿ: ಮುಂದಿನ ಕೆಲವು ದಿನಗಳವರೆಗೆ ವಾಯುವ್ಯ ಭಾರತದ ವಿವಿಧ ಭಾಗಗಳಲ್ಲಿ ಭಾರೀ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಷ್ಟ್ರ ರಾಜಧಾನಿ ದೆಹಲಿ, ಹರಿಯಾಣ, ಹಿಮಾಚಲ ಪ್ರದೇಶ, ಉತ್ತರಾಖಂಡ, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪಶ್ಚಿಮ ಮಾರುತಗಳು ಉತ್ತರ ಭಾರತದಲ್ಲಿ ಪ್ರಬಲವಾಗಿದ್ದು, ನಿನ್ನೆ ಸುರಿದ ತೀವ್ರ ಮಳೆಗೆ ಕಾರಣವಾಯಿತು. ನಿನ್ನೆ ಸುರಿದ ಭಾರೀ ಮಳೆಯು ರಾಷ್ಟ್ರ ರಾಜಧಾನಿ ದೆಹಲಿಗೆ ಈ ಋತುವಿನಲ್ಲಿ ಸುರಿದ ಮೊದಲ ಭಾರೀ ಮಳೆಯಾಗಿದೆ. ಇದರ ಪರಿಣಾಮ ದೆಹಲಿಯ ಅನೇಕ ಭಾಗಗಳು ಜಲಾವೃತಗೊಂಡು ಟ್ರಾಫಿಕ್ ಜಾಮ್ ಉಂಟಾಯಿತು. ಕಳೆದ 24 ಗಂಟೆಗಳಲ್ಲಿ ದೆಹಲಿಯು 153 ಮಿ.ಮೀ ಮಳೆ ದಾಖಲಿಸಿದ್ದು, 1982ರಿಂದ ಜುಲೈನಲ್ಲಿ ಸುರಿದ ಅತ್ಯಧಿಕ ಮಳೆಯಾಗಿದೆ. ದೆಹಲಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಇಂದು ಕೂಡ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇನ್ನೂ ಭಾರಿ ಮಳೆಯಿಂದಾಗಿ ಹಲವೆಡೆ ಸಾವುಗಳೂ ಸಂಭವಿಸಿವೆ. ಮನೆಯ ಮೇಲ್ಛಾವಣಿ ಕುಸಿದು ಬಿದ್ದು 58 ವರ್ಷ ಮಹಿಳೆ ದೆಹಲಿಯಲ್ಲಿ ಮೃತಪಟ್ಟಿದ್ದಾಳೆ. ಅಲ್ಲದೆ, 24 ಗಂಟೆಗಳಲ್ಲಿ ಮಳೆ ಸಂಬಂಧಿತ ದುರಂತದಿಂದಾಗಿ ರಾಜಸ್ಥಾನದಲ್ಲಿ ನಾಲ್ವರು ಅಸುನೀಗಿದ್ದಾರೆ. ರಾಜ್ಸಮಂದ್, ಜಲೋರ್, ಪಾಲಿ, ಅಜ್ಮೇರ್, ಅಲ್ವಾರ್, ಬನ್ಸ್ವಾರ್, ಭರತ್ಪುರ್, ಭಿಲ್ವಾರ, ಬಂಡಿ, ಚಿತ್ತೋರ್ಗಢ, ದೌಸಾ, ಧೌಲ್ಪುರ್, ಜೈಪುರ ಮತ್ತು ಕೋಟಾ ಸೇರಿದಂತೆ ರಾಜಸ್ಥಾನದಲ್ಲಿ 9ಕ್ಕೂ ಅಧಿಕ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಭಾರೀ ಮಳೆ ಮತ್ತು ಭೂಕುಸಿತಗಳಿಂದಾಗಿ ವಾರ್ಷಿಕ ಅಮರನಾಥ ಯಾತ್ರೆಯನ್ನು ಸತತ ಮೂರನೇ ದಿನವೂ ಅಮಾನತಿನಲ್ಲಿ ಇಡಲಾಗಿದೆ. ಶ್ರೀನಗರ-ಜಮ್ಮು ಹೆದ್ದಾರಿಯಲ್ಲಿ ಸುಮಾರು 3 ಸಾವಿರ ವಾಹನಗಳು ಸಿಲುಕಿವೆ. ನಿನ್ನೆ ಮಳೆಯಿಂದಾಗಿ ರಸ್ತೆ ಒಂದು ಭಾಗದಲ್ಲಿ ಬೃಹದಾಕಾರದ ಗುಂಡಿ ಬಿದ್ದ ಕಾರಣ ಸಂಚಾರ ಸ್ತಬ್ಧವಾಗಿದೆ. ಶಿಮ್ಲಾ, ಶಿರ್ಮೌರ್, ಲಾಹೌಲ್ ಮತ್ತು ಸ್ಪಿತಿ, ಚಂಬಾ ಮತ್ತು ಸೋಲನ್ ಪ್ರದೇಶಗಳಲ್ಲಿ ಭೂಕುಸಿತ, ಪ್ರವಾಹಗಳಿಂದಾಗಿ ಅನೇಕ ರಸ್ತೆಗಳು ಬ್ಲಾಕ್ ಆಗಿದ್ದು, ಹಿಮಾಚಲ ಪ್ರದೇಶದ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಇನ್ನು ದಕ್ಷಿಣ ಭಾತದಲ್ಲೂ ಹಲವು ಪ್ರದೇಶಗಳಲ್ಲಿ ಎಡೆಬಿಡದೆ ಮಳೆರಾಯ ಅಬ್ಬರಿಸುತ್ತಿದ್ದಾನೆ. ಕೇರಳ ಕರ್ನಾಟಕ ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದೆ. ಕೇರಳದ ನಾಲ್ಕು ಜಿಲ್ಲೆಗಳಾದ ಕೋಯಿಕ್ಕೋಡ್, ವೈನಾಡು, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ನೀಡಲಾಗಿದೆ. (ಏಜೆನ್ಸೀಸ್)