ತಂದೆ ಮೇಲಿನ ಕೋಪಕ್ಕೆ ಮಗನ ಕೊಂದ ಏಳು ಮಂದಿಗೆ ಜೀವಾವಧಿ ಶಿಕ್ಷೆ

court
Published on

ಬೆಂಗಳೂರು: ತಂದೆ ಮೇಲಿನ ಕೋಪಕ್ಕೆ ಮಗನ ಹತ್ಯೆ ಮಾಡಿದ್ದ ಏಳು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಸಿಸಿಎಚ್ 63ನೇ ನ್ಯಾಯಾಲಯದ ನ್ಯಾಯಾಧೀಶ ಎ. ಈರಣ್ಣ ತೀರ್ಪು ನೀಡಿದ್ದಾರೆ.

ಅಪರಾಧಿಗಳಾದ ರತೀಶ್, ಶರತ್, ವಿನೋದ್, ವಿಕ್ರಂ, ಹರೀಶ್, ಸಾಗಯ್ ರಾಜ ಮತ್ತು ಗೋಪಿ ಶಿಕ್ಷೆಗೆ ಒಳಗಾದವರು. ಅಜೀವ ಕಾರಾಗೃಹ ಸಾದಾ ಸಜೆ ಮತ್ತು 60 ಸಾವಿರ ರೂ. ದಂಡ ವಿಧಿಸಿದೆ. ಈ ದಂಡದ ಮೊತ್ತವನ್ನು ಪರಿಹಾರವಾಗಿ ಮೃತ ವ್ಯಕ್ತಿಯ ತಾಯಿಗೆ ನೀಡಬೇಕೆಂದು ನ್ಯಾಯಾಧೀಶ ಎ. ಈರಣ್ಣ, ಸೂಚಿಸಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಎಸ್. ವಾಣಿಶ್ರೀ ವಾದ ಮಂಡಿಸಿದ್ದರು.

ಅಪರಾಧಿ ರತೀಶ್ ಎಂಬಾತ ತನ್ನ ಅಣ್ಣನ ಸಾವಿಗೆ ವೇಲು ಕಾರಣ ಎಂದು ತಪ್ಪು ಕಲ್ಪನೆಯಿಂದ ದ್ವೇಷ ಸಾಧಿಸಿದ್ದ. 2021ರ ಮಾರ್ಚ್ 10ರ ರಾತ್ರಿ 8.30ರಲ್ಲಿ ಸಿದ್ದಾಪುರದ ಮೂರು ಮರ ಜಂಕ್ಷನ್ ಬಳಿ ಸಾರ್ವಜನಿಕ ಶೌಚಗೃಹಕ್ಕೆ ವೇಲು ಪುತ್ರ ಆಕಾಶ್ ತೆರಳಿದ್ದ. ಇದೇ ವೇಳೆ ರತೀಶ್, ತನ್ನ ಸಹಚರರ ಜತೆ ಸಂಚು ರೂಪಿಸಿ ಮಾರಕಾಸಗಳಿಂದ ದಾಳಿ ನಡೆಸಿ ಆತನನ್ನು ಹತ್ಯೆ ಮಾಡಿದ್ದರು.

ಈ ಬಗ್ಗೆ ಆಕಾಶ್ ತಾಯಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದರು. ಅಂದಿನ ಇನ್‌ಸ್ಪೆಕ್ಟರ್ ಎ. ರಾಜು ನೇತೃತ್ವದ ತಂಡ ಅಪರಾಧಿಗಳನ್ನು ಬಂಧಿಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ತೀರ್ಪು ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net