

ಬೆಂಗಳೂರು: ಘೋಷಿತ ಬರಪೀಡಿತ ತಾಲೂಕುಗಳ ಪಟ್ಟಿಗೆ ಹೊಸದಾಗಿ ಏಳು ತಾಲೂಕುಗಳು ಸೇರ್ಪಡೆಯಾಗಿವೆ. ಇದರಿಂದಾಗಿ ಬರ ತಾಲೂಕುಗಳ ಸಂಖ್ಯೆ 216 ರಿಂದ 223ಕ್ಕೆ ಏರಿಕೆಯಾಗಿದೆ. ಕೇಂದ್ರ ಸರ್ಕಾರದಿಂದ ಬರ ನೆರವು ನಿರೀಕ್ಷೆಯ ಮಧ್ಯೆ ಬರ ಕಾರ್ಯಕ್ರಮ ನಿರ್ವಹಣೆಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ.
ರಾಜ್ಯದ 31 ಜಿಲ್ಲೆಗಳ 236 ತಾಲೂಕುಗಳ ಪೈಕಿ 223 ತಾಲೂಕುಗಳಿಗೆ ಬರ ಆವರಿಸಿರುವುದು ನಿಚ್ಚಳವಾಗಿದೆ. ಮುಂದಿನ ಆರು ತಿಂಗಳು ಅಥವಾ ಮುಂದಿನ ಆದೇಶದವರೆಗೆ ಈ ತಾಲೂಕುಗಳು ಬರಪೀಡಿತ ಪಟ್ಟಿಯಲ್ಲಿರುತ್ತವೆ.
ಕೇಂದ್ರ ಸರ್ಕಾರದ ಬರ ಕೈಪಿಡಿ ಮಾನದಂಡಗಳ ಅನ್ವಯ, ಆಯಾ ಜಿಲ್ಲಾಧಿಕಾರಿಗಳು ಸಮೀಕ್ಷೆ ನಡೆಸಿ ಸಲ್ಲಿಸಿದ ವರದಿ ಅನ್ವಯ ಹೊಸದಾಗಿ ಹೆಚ್ಚುವರಿ ಏಳು ತಾಲೂಕುಗಳನ್ನು ಬರಪೀಡಿತ ಎಂದು ಗುರುತಿಸಿ, ಕಂದಾಯ ಇಲಾಖೆ ಶನಿವಾರ ಆದೇಶಿಸಿದೆ.
ಕೇಂದ್ರ ಸರ್ಕಾರದ ಬರ ಕೈಪಿಡಿ ಮಾನದಂಡಗಳ ಪ್ರಕಾರ ಶೇ.60ಕ್ಕಿಂತ ಹೆಚ್ಚು ಮಳೆ ಕೊರತೆ ಅಥವಾ ಸತತ ಮೂರು ವಾರಗಳ ಇಲ್ಲವೇ ಅದಕ್ಕಿಂತ ಹೆಚ್ಚು ವಾತಾವರಣ ಕಂಡು ಬಂದಿರಬೇಕು. ತತ್ಪರಿಣಾಮ ಅಳತೆಗೋಲುಗಳಾದ ಕೃಷಿ ಬಿತ್ತನೆ ಪ್ರದೇಶ, ಉಪಗ್ರಹ ಆಧಾರಿತ ಬೆಳೆ ಆರೋಗ್ಯ ಸೂಚ್ಯಂಕ, ತೇವಾಂಶ ಕೊರತೆ, ನದಿಗಳಲ್ಲಿನ ಹರಿವು, ಜಲಾಶಯಗಳ ನೀರಿನ ಸಂಗ್ರಹಣೆ ಮತ್ತು ಅಂತರ್ಜಲಮಟ್ಟ ಸೂಚ್ಯಂಕಗಳಲ್ಲಿನ ತೀವ್ರತೆಯನ್ನು ಆಧರಿಸಿ ಹೆಚ್ಚುವರಿ ಏಳು ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲಾಗಿದೆ.
ಬೀದರ ಜಿಲ್ಲೆಯ ಔರಾದ್, ಬೀದರ್, ಚಿಟಗುಪ್ಪಾ, ಹುಮ್ನಾಬಾದ್, ಕಮಲನಗರ, ರಾಯಚೂರು ಜಿಲ್ಲೆಯ ಸಿಂಧನೂರು ಮತ್ತು ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕುಗಳು ಹೊಸದಾಗಿ ಬರ ಘೋಷಿತ ಪಟ್ಟಿಗೆ ಸೇರಿವೆ.
ಈ ನಡುವೆ ಪ್ರಕೃತಿ ಪರಿಹಾರ ನಿಯಮಾವಳಿಯಂತೆ ಎಸ್‌ಡಿಆರ್‌ಎ್ ಅಡಿ 324 ಕೋಟಿ ರೂ. ಸರ್ಕಾರ ಬಿಡುಗಡೆ ಮಾಡಿದೆ. ಆಯಾ ಜಿಲ್ಲೆಗಳ ಬರಪೀಡಿತ ತಾಲೂಕುಗಳ ಸಂಖ್ಯೆ, ಭೌಗೋಳಿಕ ಪ್ರದೇಶ, ಬೇಡಿಕೆಗಳ ಅನ್ವಯ ಎಸ್‌ಡಿಆರ್‌ಎಫ್ ಅನುದಾನವನ್ನು ಜಿಲ್ಲಾವಾರು ಹಂಚಿಕೆ ಮಾಡಿ ಅಧಿಕೃತ ಆದೇಶ ಹೊರಡಿಸಿದ್ದು, ಅನುದಾನ ಬಳಕೆ ಕುರಿತು ಜಿಲ್ಲಾಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದೆ.