

ಚೆಂದಳಿರು ದಿನದಿನಮುಮೊಗೆಯೆ ನೀರೆರೆದು||
ಸಂದ ಬಲದಿಂದ ಜಗದಶ್ವತ್ಥ ಸೇವೆಯಲಿ|
ನಿಂದಿರುವುದಲೆ ಧರ್ಮ-ಮಂಕುತಿಮ್ಮ||253||
ಅವತ್ತವತ್ತಿಗೆ ಆದಷ್ಟು ಬುಡವನ್ನು ಕಟ್ಟಿ, ಕಳೆಗಿಡಗಳನ್ನು ತೆಗೆಯ ಬೇಕು. ದಿನದಿನವೂ ನೀರನ್ನು ಮೊಗೆಮೊಗೆದು ಎರೆಯ ಬೇಕು. ಇದರಿಂದಾಗಿ ಚೆಂದಳಿರು ಮೂಡುತ್ತದೆ. ಎಷ್ಟು ಶಕ್ತಿ ಇದೆಯೋ ಅಷ್ಟರಿಂದ ಜಗದಶ್ವತ್ಥ ಸೇವೆಯನ್ನು ಮಾಡಬೇಕು. ಯಾಕೆಂದರೆ ಧರ್ಮ ನಿಂತಿರುವುದೇ ಈ ಸೇವೆಯಲ್ಲಿ ಎನ್ನುತ್ತದೆ ಈ ಕಗ್ಗ.
ಜೀವ, ಧರ್ಮ ಮತ್ತು ಈಶ್ವರ ಸಂಬಂಧಿಯಾಗಿರುವ ಜಗತ್ತು ತಲೆ ಕೆಳಗಾದ ಅಶ್ವತ್ಥ ಮರದಂತೆ ಇದೆ. ಈ ಅಶ್ವತ್ಥದ ಬುಡ, ಬೇರುಗಳು ಊಹೆಗೆ ನಿಲುಕದಂತೆ ವ್ಯೋಮದಲ್ಲಿ ಹರಡಿ ಕೊಂಡಿದೆ. ಮೂಲಬೇರು ಎಲ್ಲಿದೆಯೋ ತಿಳಿಯದು. ಅದನ್ನು ಕಾಣುವುದಕ್ಕೋ, ಗ್ರಹಿಸುವುದಕ್ಕೋ ಸಾಮಾನ್ಯರಿಗೆ ಸಾಧ್ಯವಿಲ್ಲ. ಕೊಂಬೆ, ರೆಂಬೆ, ಎಲೆಗಳು ಕೆಳಭಾಗಕ್ಕೆ ಕೈಗೆಟಕುವಂತಿದೆ. ಅಂದರೆ ಲೋಕ ಜೀವನದ ಎಲ್ಲವೂ ಈ ಮರದ ಸಾಮಗ್ರಿಗಳು. ಮೇಲಕ್ಕೂ ಕೆಳಕ್ಕೂ ಚಾಚಿಕೊಂಡಿರುವ ಈ ಮರವನ್ನು ಸತ್ತ್ವ, ರಜೋ ಮತ್ತು ತಮಗಳೆಂಬ ಗುಣತ್ರಯಗಳು ಪೋಷಿಸುತ್ತವೆ. ಇದನ್ನು ವಿಶ್ವಾಶ್ವತ್ಥ ಎನ್ನುತ್ತಾರೆ. ಮನುಷ್ಯ ಲೋಕದ ವಿವಿಧ ಬಯಕೆಗಳು, ಕೆಲಸ-ಕಾರ್ಯಗಳು ಈ ಮರವನ್ನು ವಿಸ್ತಾರವಾಗಿ ಬೆಳೆಸುತ್ತಿದೆ. ಈ ಲೋಕ ಸಂಸಾರ ವೃಕ್ಷದ ಪ್ರಗತಿಯಲ್ಲಿ ಮನುಷ್ಯನಿಗೆ ಗುರುತರವಾದ ಹೊಣೆಗಾರಿಕೆ ಇದೆ.
ವಿವೇಚನಾಶಕ್ತಿ ಮತ್ತು ಸಂವಹನಾಶಕ್ತಿಯನ್ನು ಹೊಂದಿರುವ ಮನುಷ್ಯನು ಉಳಿದ ಪ್ರಾಣಿಗಳಂತೆ ಹುಟ್ಟು-ಸಾವಿನ ನಡುವೆ ಹೇಗೆಯೋ ಬದುಕಿರುವುದಲ್ಲ. ತನ್ನದಾದ ಜ್ಞಾನ, ಇಚ್ಛಾ ಮತ್ತು ಕ್ರಿಯಾ ಶಕ್ತಿಯನ್ನು ಬಳಸಿಕೊಂಡು ಲೋಕೋದ್ಧಾರಕ್ಕಾಗಿ ಶ್ರಮಿಸಬೇಕು. ಪ್ರಕೃತಿಯಲ್ಲಿರುವ ಪ್ರತಿಯೊಂದಕ್ಕೂ ಅದರದ್ದೇ ಆದ ಧರ್ಮವಿದೆ. ಅದನ್ನು ಉಪೇಕ್ಷಿಸಿಯೋ, ಮೀರಿಯೋ ಅವು ನಡೆದುಕೊಳ್ಳುವುದಿಲ್ಲ. ಪ್ರಕೃತಿ ವಿರಚಿಸಿದ ಸಹಜ ಧರ್ಮದಂತೆಯೇ ಬಾಳುತ್ತವೆ. ಆದರೆ ಮನುಷ್ಯನು ವಿವೇಕಿಯಾಗಿದ್ದರೂ, ಸರಿ-ತಪ್ಪುಗಳ ಅರಿವಿದ್ದರೂ ಪ್ರಕೃತಿಯ ಸಂರಕ್ಷಣೆಯ ಬಗೆಗೆ ಯೋಚಿಸದೆ ನಾಶಕ್ಕೆ ಕಾರಣನಾಗುತ್ತಾನೆ. ನಿಸರ್ಗಕ್ಕೆ ಸಂಬಂಧಿಸಿ ತನ್ನ ಕರ್ತವ್ಯಗಳೇನು? ತನ್ನ ಕೃತ್ಯಗಳಿಂದ ಸಮಾಜದ ಮೇಲೆ ಆಗುವ ಪರಿಣಾಮವೇನು ಎನ್ನುವುದನ್ನೂ ಯೋಚಿಸದೆ ಸ್ವೇಚ್ಛಾಚಾರಿಯಾಗಿದ್ದಾನೆ. ಇದರಿಂದಾಗಿ ಪರಿಸರ ಸಮತೋಲವು ಏರುಪೇರಾಗುತ್ತದೆ. ಜನಜೀವನವು ಮತ್ತೆಮತ್ತೆ ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ಮನುಷ್ಯನು ಸ್ವಕೇಂದ್ರಿತನಾಗಿ ತನ್ನ ಸುಖ-ಸಂತೋಷ ಗಳನ್ನಷ್ಟೇ ಗಮನಿಸುತ್ತ, ಅದಕ್ಕಷ್ಟೇ ಒತ್ತು ನೀಡುತ್ತ ಬದುಕಿದರೆ ಜೀವಜಗತ್ತು ನೆಮ್ಮದಿಯಾಗಿರಲು ಸಾಧ್ಯವಿಲ್ಲ. ತನ್ನಂತೆಯೇ ಇತರರೂ ಎಂದು ಯೋಚಿಸುವ, ನೋವು-ನಲಿವುಗಳಿಗೆ ಸ್ಪಂದಿಸುವ ಸಹೃದಯತೆಯು ಬೇಕು. ತನ್ನ ಉಳಿವಿಗಾಗಿ ಅನ್ಯರನ್ನು ನಾಶ ಮಾಡುವ, ಭ್ರಷ್ಟಾಚಾರ, ದ್ವೇಷಗಳಿಂದ ಸಮಾಜದ ವಿಘಟ ನೆಗೆ ಕಾರಣವಾಗುವ ಮನೋಸ್ಥಿತಿಯಿಂದ ಲೋಕ ಪ್ರಗತಿಯು ಸಾಧ್ಯವಿಲ್ಲ. ಸಮಷ್ಟಿಯ ಹಿತ ಚಿಂತನೆ, ಲೋಕ ಮೈತ್ರಿ ಮತ್ತು ಸಮದರ್ಶಿತ್ವವು ವ್ಯಕ್ತಿಯು ಅನುಸರಿಸಬೇಕಾದ ಜೀವನಮೌಲ್ಯ. ಪರಿಸರವನ್ನೇ ನಾಶ ಮಾಡುವ ಯುದ್ಧ, ಭಯದಿಂದ ಬದುಕುವಂತೆ ಮಾಡುವ ಹಿಂಸಾಪ್ರವೃತ್ತಿ, ಅರ್ಥವಿಲ್ಲದ ನಂಬಿಕೆಗಳು ಲೋಕ ಶಾಂತಿಯನ್ನು ನಾಶಮಾಡುತ್ತವೆ. ಹಾಗಾಗಿ ಪ್ರತಿಯೊಬ್ಬರಿಗೂ ಲೋಕ ಸಂಸಾರದ ಕ್ಷೇಮ ಮತ್ತು ಅಭ್ಯುದಯದಲ್ಲಿ ಕರ್ತವ್ಯ ಗಳಿವೆ. ಪುಟ್ಟ ಕುಟುಂಬದಲ್ಲಿ ಬದುಕುವ ಹಂತದಲ್ಲೂ ಪ್ರತಿಯೊ ಬ್ಬರು ಪಾಲಿಸಲೇಬೇಕಾದ ಕರ್ತವ್ಯಗಳಿವೆ. ತನ್ನ ಸುಖ, ತನ್ನ ಅರಾಮದಾಯಕ ಸ್ಥಿತಿಯ ಬಗೆಗೆ ಮಾತ್ರ ಯೋಚಿಸಿ ನಿರ್ದಾಕ್ಷಿಣ್ಯ ವಾಗಿ ನಡೆದುಕೊಳ್ಳುವುದಲ್ಲ. ಮೋಹ, ಮದ, ಮತ್ಸರಗಳಿಂದಾಗಿ ಕುಟುಂಬವು ಒಡೆದುಹೋಗುವ, ವಿದ್ವೇಷವು ಹೆಚ್ಚಾಗುವ ಸ್ಥಿತಿಯು ಸಂಘಜೀವನಕ್ಕೆ ಮಾರಕವೇ ಹೌದು.
ಇಷ್ಟೇ ಅಲ್ಲ ಮದುವೆಯನ್ನು ನಿರಾಕರಿಸುವ ಯುವಜನತೆ, ಮಕ್ಕಳ ಹೊಣೆಯು ಭಾರವೆಂದು ವಿಮುಖರಾಗುವ ದಂಪತಿ ಗಳು, ಸಮಾಜದ ಆಗು-ಹೋಗುಗಳು ತನಗೆ ಸಂಬಂಧಿಸಿದ್ದಲ್ಲ ಎನ್ನುವ ಔದಾಸೀನ್ಯ, ಸ್ವಂತ ಸುಖವನ್ನಷ್ಟೇ ಬಯಸುವ ಧೋರಣೆಗಳು ಲೋಕಸಂಸಾರವನ್ನು ಅಸಹಜವಾಗಿಸುತ್ತವೆ.
ಜಗದಶ್ವತ್ಥದ ಸೇವೆಯನ್ನು ಮಾಡುವುದು ಪ್ರತಿಯೊಬ್ಬರ ಜೀವನ ಧರ್ಮ. ಸತ್ಕಾರ್ಯ, ಸಚ್ಛಿಂತನೆಗಳ ಮೂಲಕ ಸಾತ್ತಿ್ವಕತೆಯು ಪಸರಿಸುವಂತೆ ಮಾಡಬೇಕು. ಉದ್ಯಾನವನದಲ್ಲಿರುವ ಅಶ್ವತ್ಥ ಗಿಡದ ಬುಡಕ್ಕೆ ನೀರೆರೆದು, ಕಳೆ ತೆಗೆದು ಜೋಪಾನಮಾಡಲಾಗುತ್ತದೆ. ಅಂತೆಯೇ ಜಗದಶ್ವತ್ಥದ ಸೇವೆಯಲ್ಲಿ ಸೇರಿಕೊಂಡಿರುವ ಮನುಜರು ಅಂದಂದಿಗೆ ಆದಷ್ಟು ಸತ್ಕಾರ್ಯಗಳನ್ನು ಮಾಡುತ್ತಿರಬೇಕು. ಸಹಜ ಧರ್ಮವನ್ನು ಅನುಸರಿಸಬೇಕು. ಅಶ್ವತ್ಥದಲ್ಲಿ ದಿನದಿನವೂ ಚೆಂದಳಿರು ಮೂಡುವಂತೆ ಜನರಲ್ಲೂ ಪ್ರಜ್ಞೆಯು ಜಾಗ್ರತರಾದರೆ ಲೋಕವು ಸುಭಿಕ್ಷವಾಗುತ್ತದೆ. ಹಾಗಾಗಿ ವ್ಯಕ್ತಿಯು ನನ್ನ ಜೀವನ ನನ್ನ ಇಷ್ಟ ಎನ್ನುವ ಧೋರಣೆಯನ್ನು ಬಿಟ್ಟು ಸಮಷ್ಟಿಯ ಕ್ಷೇಮದ ಬಗೆಗೆ ಚಿಂತಿಸಬೇಕು. ಪರಸ್ಪರ ಅವಲಂಬಿತವಾದ ಜೀವನದಲ್ಲಿ ತಮ್ಮದಾದ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಮಾಡುವುದೇ ನಿಜವಾದ ಸಮಾಜಸೇವೆ. (ಲೇಖಕರು ಉಪನ್ಯಾಸಕರು, ಕವಯಿತ್ರಿ)
(ಪ್ರತಿಕ್ರಿಯಿಸಿ: vvsudina@gmail.com, kaviadoor@gmail.com)