

ಕೋಲಾರ: ನಗರದ ಡೂಂಲೈಟ್ ವೃತ್ತ ಹಾಗೂ ಟೇಕಲ್ ಮುಖ್ಯರಸ್ತೆಯಲ್ಲಿನ 7 ಅಂಗಡಿಗಳಲ್ಲಿ ಮಂಗಳವಾರ ರಾತ್ರಿ ಸರಣಿ ಕಳ್ಳತನ ನಡೆದಿದೆ.
ಮುಖಕ್ಕೆ ಮಂಕಿ ಕ್ಯಾಪ್ ಧರಿಸಿರುವ ಕಳ್ಳರು ಅಪೋಲೊ ಮೆಡಿಕಲ್ಸ್, ಮೆಡ್ಪ್ಲಸ್, ವಿ.ಮಾರ್ಟ್ ಸೂಪರ್ ಮಾರ್ಕೆಟ್ ಸೇರಿ ವಿವಿಧ ಅಂಗಡಿಗಳಲ್ಲಿ ಕೈಚಳಕ ತೋರಿಸಿದ್ದು, ರಾಡ್ನಿಂದ ಅಂಗಡಿ ಮುಂಭಾಗದ ಬಾಗಿಲು ಒಡೆದು ಒಳನುಗ್ಗಿರುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಮೆಡ್ಪ್ಲಸ್ ಮಳಿಗೆಯಲ್ಲಿ 50 ಸಾವಿರ ರೂ. ನಗದು, ಅಪೋಲೋ ಮೆಡಿಕಲ್ಸ್ನಲ್ಲಿ 11 ಸಾವಿರ, ದಿನಸಿ ಮಾರ್ಟ್ಗಳ ಕ್ಯಾಶ್ ಬಾಕ್ಸ್ನಲ್ಲಿದ್ದ ಸಾವಿರಾರು ರೂಪಾಯಿ ಹಣವನ್ನು ಕಳುವು ಮಾಡಿ ಪರಾರಿಯಾಗಿದ್ದಾರೆ.
ಸಾಕಷ್ಟು ದಿನಗಳಿಂದ ನಗರದಲ್ಲಿ ಸರಣಿ ಕಳುವು, ಸರ ಕಳ್ಳತನ ಪ್ರಕರಣಗಳು ಇಲ್ಲವಾದ್ದರಿಂದ ಜನತೆ ನಿರಾಳರಾಗಿದ್ದರು. ಇದೀಗ ಒಂದೇ ರಾತ್ರಿಯಲ್ಲಿ 7 ಮಳಿಗೆಗಳಲ್ಲಿ ನಡೆದಿರುವ ಸರಣಿ ಕಳುವಿನಿಂದಾಗಿ ನಗರದ ಜನತೆ ಬೆಚ್ಚಿ ಬಿದ್ದಿದ್ದಾರೆ. ಘಟನೆ ಸಂಬಂಧ ನಗರ ಠಾಣೆ ಪೊಲೀಸರು ಭೇಟಿ ನೀಡಿ, ಬೆರಳಚ್ಚು ತಜ್ಞರನ್ನು ಕರೆಯಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.