ಸಿಯೋನಿ: ಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ರಾತ್ರಿಯಿಡೀ ಉರಿಯುತ್ತಿದ್ದ ಮಣ್ಣಿನ ದೀಪದಿಂದ ಸೋಮವಾರ ನಸುಕಿನಲ್ಲಿ ಮೂರಂತಸ್ತಿನ ಮನೆಗೆ ಬೆಂಕಿ ಹೊತ್ತಿಕೊಂಡು, ಎರಡು ತಿಂಗಳ ಶಿಶು ಸೇರಿ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿದ್ದಾರೆ.
ಮತ್ತೊಂದೆಡೆ, 250 ಕಿ.ಮೀ. ದೂರದ ಸಿಯೋನಿ ಜಿಲ್ಲೆಯಲ್ಲಿ ಚಿನ್ನದ ವ್ಯಾಪಾರಿಯ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿ ಆರು ಮಂದಿ ಸಾವಿಗೀಡಾಗಿದ್ದು, ಎರಡೂ ಜಿಲ್ಲೆಗಳಲ್ಲಿ ಒಟ್ಟು ಮೖತರ ಸಂಖ್ಯೆ 12ಕ್ಕೇರಿದೆ. ಕಟ್ನಿಯ ಬರ್ಹಿ ಪಟ್ಟಣದಲ್ಲಿ 77 ವರ್ಷದ ಪುರಾನ್ ಅಗರ್ವಾಲ್, ಅವರ ಪತ್ನಿ ಚಂದ್ರಕಲಾ, ಸೊಸೆ ಪೂನಂ, ಮೊಮ್ಮಕ್ಕಳಾದ ಆರ್ಯ (14), ಅನ್ವಿ (6) ಹಾಗೂ ಶಿಶು ಮೃತಪಟ್ಟಿದ್ದಾರೆ.
ಕಾಫಿ ಯಂತ್ರದ ಬಳಿ ಇಟ್ಟಿದ್ದ ದೀಪದಿಂದ ಬೆಂಕಿ ಹರಡಿತು ಎಂದು ಎಸ್ಪಿ ಅಭಿನವ್ ವಿಶ್ವಕರ್ಮ ತಿಳಿಸಿದ್ದಾರೆ. ನೆಲಮಹಡಿಯಲ್ಲಿದ್ದ ಪಿಂಗಾಣಿ ಅಂಗಡಿಯ ಸಾಮಗ್ರಿಗಳು ಬೆಂಕಿಗೆ ಇಂಧನವಾದವು. ಈ ದುರಂತದಲ್ಲಿ ಇಬ್ಬರು ಮಾತ್ರ ಪಾರಾಗಿದ್ದಾರೆ.
ಬೆಂಕಿ ಬಗ್ಗೆ ಮಧ್ಯರಾತ್ರಿ 12.30ಕ್ಕೆ ಮಾಹಿತಿ ಬಂದಿತ್ತು. ಆದರೆ ಬರ್ಹಿ ನಗರಸಭೆಯ ಮೊದಲ ಅಗ್ನಿಶಾಮಕ ವಾಹನ ಒಂದು ಗಂಟೆ ತಡವಾಗಿ ಬಂದಿತು ಮತ್ತು ಅದರ ಪೈಪ್ ಹಾಳಾಗಿತ್ತು ಎಂದು ಸಂಬಂಧಿಕರು ಆರೋಪಿಸಿದ್ದಾರೆ. ವಿಜಯರಾಘವಗಢದಿಂದ ಬಂದ ವಾಹನದ ಪೈಪ್ ಕೂಡ ದೋಷಯುಕ್ತವಾಗಿತ್ತು ಎನ್ನಲಾಗಿದೆ. ಬೆಳಗಿನ ಜಾವ 5ಕ್ಕೆ ಎಸ್ಡಿಆರ್ಎಫ್ ತಂಡ ಆಗಮಿಸಿತು.
ಸಿಯೋನಿಯ ಛಪಾರಾ ಪಟ್ಟಣದಲ್ಲಿ ಬೆಳಗ್ಗೆ 4.30ಕ್ಕೆ ಚಿನ್ನದ ವ್ಯಾಪಾರಿ ಕುಂದನ್ ಲಾಲ್ ಸೋನಿ (75) ಅವರ ಮೂರಂತಸ್ತಿನ ಮನೆಗೆ ಬೆಂಕಿ ಬಿದ್ದಿತು. ಮನೆಯಲ್ಲಿದ್ದ ಹತ್ತು ಮಂದಿಯ ಪೈಕಿ ಕುಂದನ್ ಲಾಲ್, ಪತ್ನಿ ರಾಜಕುಮಾರಿ, ಸೊಸೆಯಂದಿರಾದ ರಿತು, ಸ್ಮೃತಿ, ಸಂಬಂಧಿ ಸೂರ್ಯ ಹಾಗೂ ಮೊಮ್ಮಗ ಆದಿತ್ಯ (16) ಹೊಗೆ ಮತ್ತು ಸುಟ್ಟ ಗಾಯಗಳಿಂದ ಮೃತಪಟ್ಟಿದ್ದಾರೆ. ನಾಲ್ವರನ್ನು ರಕ್ಷಿಸಲಾಗಿದೆ